ತುಳುನಾಡಿನ ಸಂಪ್ರದಾಯಿಕ ಜನಪದ ಕ್ರೀಡೆಯಾದ ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಾರಿ 10 ಕಡೆಯ ಕಂಬಳ ಕೂಟಗಳಿಗೆ ತಲಾ ₹5 ಲಕ್ಷ ಅನುದಾನ ನೀಡುವ ಮೂಲಕ ಕ್ರೀಡೆಗೆ ಸರ್ಕಾರ ಬಲ ನೀಡಿದೆ.

ಕಂಬಳಕ್ಕೆ ಅನುದಾನ ನೀಡುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸರ್ಕಾರದ ಈ ನಿರ್ಧಾರವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವಾಗತಿಸಿದ್ದಾರೆ.
“ತುಳುನಾಡಿನಲ್ಲಿ ನಡೆಯುವ ಜನಪದ ಕ್ರೀಡೆ ಕಂಬಳಕ್ಕೆ ಈವರೆಗೂ ಯಾವುದೇ ಸರ್ಕಾರದಿಂದ ಅನುದಾನ ದೊರೆತಿರಲಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಂಬಳಕ್ಕೆ ನೀಡಿರುವ ಬೆಂಬಲ ಅಭಿನಂದನಾರ್ಹ. ಹಿಂದಿನ ಬಾರಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬೆಂಗಳೂರು ಕಂಬಳ ಈ ಕ್ರೀಡೆಗೆ ಜಾಗತಿಕ ಮಟ್ಟದಲ್ಲಿ ಗುರುತಿನ ಗಳಿಕೆಗೆ ಕಾರಣವಾಯಿತು.
ಕಂಬಳ ಅಭಿಮಾನಿಗಳ ಪರವಾಗಿ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಈ ನೆರವು ಕಂಬಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ,” ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ

