ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಇತಿಹಾಸ ಸೃಷ್ಟಿ – ಒಟ್ಟು 18 ಪದಕಗಳ ದಾಖಲೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಇತಿಹಾಸ ಸೃಷ್ಟಿ – ಒಟ್ಟು 18 ಪದಕಗಳ ದಾಖಲೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ 2025ರ ಕೊನೆಯಿಂದ ಒಂದು ದಿನ ಮುಂಚೆ ಭಾರತವು ಮೂರು ಪದಕಗಳನ್ನು ಕೈಸೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ನಿನ್ನೆ (ಅಕ್ಟೋಬರ್ 4) ನಡೆದ ಸ್ಪರ್ಧೆಗಳಲ್ಲಿ ಭಾರತದ ಏಕ್ತಾ ಭ್ಯಾನ್, ಸೋಮನ್ ರಾಣಾ ಹಾಗೂ ಪ್ರವೀಣ್ ಕುಮಾರ್ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಈ ಪ್ರದರ್ಶನದೊಂದಿಗೆ ಭಾರತ ತನ್ನ ಒಟ್ಟು ಪದಕ ಸಂಖ್ಯೆಯನ್ನು 18ಕ್ಕೆ (6 ಚಿನ್ನ, 7 ಬೆಳ್ಳಿ ಮತ್ತು 5 ಕಂಚು) ಏರಿಸಿಕೊಂಡಿದ್ದು, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆ ಆಗಿದೆ.

ಹಿಂದಿನ ಬಾರಿ 2024ರಲ್ಲಿ ಜಪಾನ್‌ನ ಕೋಬೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತವು 17 ಪದಕಗಳನ್ನು (6 ಚಿನ್ನ, 5 ಬೆಳ್ಳಿ, 6 ಕಂಚು) ಗೆದ್ದಿತ್ತು.

🥈 ಏಕ್ತಾ ಭ್ಯಾನ್‌ — ಮಹಿಳೆಯರ ಕ್ಲಬ್ ಥ್ರೋ F51 ವಿಭಾಗದಲ್ಲಿ ಬೆಳ್ಳಿ. ಏಕ್ತಾ ಭ್ಯಾನ್ ಅವರು 19.80 ಮೀಟರ್ ದೂರದ ಸೀಸನ್‌ನ ಅತ್ಯುತ್ತಮ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು. ಅವರು ಯಾವ ಎಸೆತವನ್ನೂ ಫೌಲ್ ಮಾಡದೆ ನಿರಂತರ ಪ್ರದರ್ಶನ ನೀಡಿದರು. ಉಕ್ರೇನ್‌ನ ಟೋಕಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಜೊಯಾ ಒವ್ಸೀ 24.03 ಮೀಟರ್ ದೂರದ ಎಸೆತದೊಂದಿಗೆ ಚಿನ್ನ ಪಡೆದರೆ, ನ್ಯೂಟ್ರಲ್ ಪ್ಯಾರಾ ಅಥ್ಲೀಟ್ ಎಕಟೆರಿನಾ ಪೊಟಪೋವಾ (18.60 ಮೀ) ಕಂಚು ಪಡೆದರು.

🥈 ಸೋಮನ್ ರಾಣಾ — ಪುರುಷರ ಶಾಟ್‌ಪುಟ್ F57 ವಿಭಾಗದಲ್ಲಿ ಬೆಳ್ಳಿಭಾರತದ ಸೋಮನ್ ರಾಣಾ ಅವರು 14.69 ಮೀಟರ್ ಎಸೆದು ತಮ್ಮ ಮೊದಲ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಪದಕವನ್ನು ಕೈಸೇರಿಸಿಕೊಂಡರು. ಇರಾನ್‌ನ ಯಾಸಿನ್ ಖೊಸರಾವಿ ವಿಶ್ವದಾಖಲೆಯಾದ 16.60 ಮೀ ಎಸೆದು ಚಿನ್ನ ಪಡೆದರೆ, ಫಿನ್‌ಲ್ಯಾಂಡ್‌ನ ಟೆಜೊ ಕೂಪಿಕ್ಕಾ (14.51 ಮೀ) ಕಂಚಿನ ಪದಕ ಪಡೆದರು.

🥉 ಪ್ರವೀಣ್ ಕುಮಾರ್ — ಪುರುಷರ ಹೈಜಂಪ್ T64 ವಿಭಾಗದಲ್ಲಿ ಕಂಚು22 ವರ್ಷದ ಪ್ರವೀಣ್ ಕುಮಾರ್ ಅವರು 2.00 ಮೀಟರ್ ಎತ್ತರ ಜಿಗಿದು ಸೀಸನ್‌ನ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚು ಪಡೆದರು. ಉಜ್ಬೇಕಿಸ್ತಾನದ ತೆಮೂರ್ಬೇಕ್ ಗಿಯಾಜೋವ್ 2.03 ಮೀ ಜಿಗಿದು ಚಿನ್ನ ಪಡೆದರೆ, ಬ್ರಿಟನ್‌ನ ಜೊನಾಥನ್ ಬ್ರೂಮ್-ಎಡ್ವರ್ಡ್ಸ್ 2.00 ಮೀ ಎತ್ತರದ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಬೆಳ್ಳಿ ಪಡೆದರು.

ಈ ಬಾರಿ ನವದೆಹಲಿಯಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 104 ರಾಷ್ಟ್ರಗಳ 2000ಕ್ಕೂ ಹೆಚ್ಚು ಅಥ್ಲೀಟ್‌ಗಳು 186 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಭಾರತದಿಂದ ಒಟ್ಟು 73 ಮಂದಿ (54 ಪುರುಷರು ಮತ್ತು 19 ಮಹಿಳೆಯರು) ಸ್ಪರ್ಧಿಸುತ್ತಿದ್ದು, ಇಂದು ಈ ಸ್ಪರ್ಧೆಯ ಅಂತಿಮ ದಿನ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ