ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ 1 ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡ ಸಿನೆಮಾ ಇತಿಹಾಸದಲ್ಲಿ ಮೇಕಿಂಗ್ ದೃಷ್ಟಿಯಿಂದ ಇದು ಒಂದು ಮೈಲಿಗಲ್ಲು ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ಹಿಂದಿನ ಕಾಂತಾರ ಚಿತ್ರವು ತುಳುನಾಡಿನ ದೈವಾರಾಧನೆ ಹಾಗೂ ಜಮೀನ್ದಾರ ಪದ್ಧತಿಯ ದೌರ್ಜನ್ಯವನ್ನು ನೈಜವಾಗಿ ತೋರಿಸಿದ್ದರೆ, ಚಾಪ್ಟರ್ 1 ಸಂಪೂರ್ಣ ಕಾಲ್ಪನಿಕ ಮನೋರಂಜನಾ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಹೀಗಾಗಿ, ಹಿಂದಿನ ಚಿತ್ರವನ್ನು ನೆನಪಿನಲ್ಲಿಟ್ಟುಕೊಂಡು ತೆರಳಿದರೆ ಸ್ವಲ್ಪ ನಿರಾಸೆಯೂ ಆಗಬಹುದು.

▪️ಕಥೆಯ ಆರಂಭ ನಿಧಾನವಾಗಿದ್ದರೂ, ನಂತರ ಪ್ರೇಕ್ಷಕರನ್ನು ಬೇರೆಯೇ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ಕನಕವತಿಯ ಪಾತ್ರ ಕೊನೆಯವರೆಗೂ ಸರಳವಾಗಿ ಸಾಗಿದರೂ, ಅಂತಿಮ ಕ್ಷಣದಲ್ಲಿ ಬರುವ ಅಚ್ಚರಿಯ ಟ್ವಿಸ್ಟ್ ಯಾರೂ ಊಹಿಸಲು ಸಾಧ್ಯವಿಲ್ಲ.

▪️ಇನ್ನು ಮಲಯಾಳಂನ ಮೇರು ನಟ ‘ಜಯರಾಮ್’ ರಾಜಶೇಖರನಾಗಿ ಕಾಣಿಸಿಕೊಂಡರೂ, ಅವರ ನೈಜ ಅಭಿನಯವನ್ನು ಈ ಪಾತ್ರದಲ್ಲಿ ಅಷ್ಟಾಗಿ ಬಳಸಿಕೊಂಡಿಲ್ಲ ಎಂದು ಅನಿಸುತ್ತದೆ.
▪️ಪ್ರಕಾಶ್ ತುಮಿನಾಡು ಮತ್ತು ದೀಪಕ್ ರೈ ಪಾಣಾಜೆ ಅವರ ಹಾಸ್ಯ ಪ್ರೇಕ್ಷಕರನ್ನು ಬೇಸರಗೊಳಿಸದೆ ಚಿತ್ರದುದ್ದಕ್ಕೂ ಕೊಂಡೊಯ್ಯುತ್ತದೆ.

▪️ಚಿತ್ರದ ತಾಂತ್ರಿಕ ಅಂಶಗಳು ಅದ್ಭುತವಾಗಿವೆ. ಸೆಟ್‌ಗಳು, ಯುದ್ಧ-ಬೇಟೆ, ರಥ ಸನ್ನಿವೇಶಗಳು ಬಾಹುಬಲಿಯನ್ನು ನೆನಪಿಗೆ ತರುತ್ತವೆ. ಕನ್ನಡದಲ್ಲಿಯೂ ಇಂತಹ ಅದ್ಭುತ ಮೇಕಿಂಗ್‌ನ ಸಿನೆಮಾ ಮಾಡಬಹುದು ಎಂಬುದನ್ನು ರಿಷಬ್ ಶೆಟ್ಟಿ ತೋರಿಸಿದ್ದಾರೆ. ಆದರೆ ಹಿಂದಿನ ಕಾಂತಾರದಲ್ಲಿ ಇದ್ದ ದೈವಾರಾಧನೆ ಸನ್ನಿವೇಶಗಳ ನೈಜತೆ, ಭಕ್ತಿ ಭಾವಗಳು ಇಲ್ಲಿ ಕಾಣಿಸದಿರುವುದು ಖಂಡಿತವಾಗಿಯೂ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಮೂಡಿಸಬಹುದು.

▪️ರಾಜ್ ಬಿ ಶೆಟ್ಟಿ ನಿರ್ದೇಶಿಸಿದ ದೈವಸನ್ನಿವೇಶಗಳು ಹಿಂದಿನ ಚಿತ್ರದಲ್ಲಿ ಪ್ರೇಕ್ಷಕರ ಹೃದಯಕ್ಕಿಳಿದಿದ್ದರೆ, ಚಾಪ್ಟರ್ 1 ನಲ್ಲಿ ಅವು ನೈಜ ರೂಪದಲ್ಲಿ ಇರದೇ (ಮುಖವರ್ಣಿಕೆ ಮತ್ತು ಅಲಂಕಾರ) ಕೇವಲ ಸನ್ನಿವೇಶಕ್ಕೆ ಬಳಸಿಕೊಂಡಂತೆ ಭಾಸವಾಗುತ್ತದೆ.

▪️ಮೊದಲ ಭಾಗದಲ್ಲಿ ಜನಮನ ಗೆದ್ದ ಹಾಡುಗಳ ರೀತಿ ಚಾಪ್ಟರ್-1 ಅಲ್ಲಿ ಇರುವ ಹಾಡುಗಳು ಅಷ್ಟಾಗಿ ಪ್ರೇಕ್ಷಕರ ಮನ ಮುಟ್ಟುವುದಿಲ್ಲ.

ಒಟ್ಟಾರೆ, ಕಾಂತಾರ ಕಥೆ ಜನರ ಹೃದಯಕ್ಕೆ ಹತ್ತಿರವಾದರೆ, ಚಾಪ್ಟರ್ 1 ಪ್ರೇಕ್ಷಕರನ್ನು ಸಂಪೂರ್ಣ ಕಾಲ್ಪನಿಕ ಲೋಕಕ್ಕೆ ಕರೆದುಕೊಂಡು ಹೋಗುವ ಮನೋರಂಜನಾ ಅನುಭವ. ಕನಕವತಿಯ ಪಾತ್ರದ ಟ್ವಿಸ್ಟ್ ಬಿಟ್ಟರೆ, ಉಳಿದ ಪಾತ್ರಗಳು ಚಿತ್ರಮಂದಿರದಿಂದ ಹೊರಬಂದ ನಂತರ ಹೆಚ್ಚು ನೆನಪಲ್ಲಿ ಉಳಿಯುವುದಿಲ್ಲ.

ಮೌಲ್ಯಮಾಪನ:

ಮೇಕಿಂಗ್ – 10ರಲ್ಲಿ 9

ಅಭಿನಯ – 10ರಲ್ಲಿ 9

ಕಥೆ – 10ರಲ್ಲಿ 7

👉 ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದೃಷ್ಟಿಕೋನ ನೀಡುವ ಕಾಂತಾರ ಚಾಪ್ಟರ್ 1 ನಿರೀಕ್ಷೆಗೂ ಮೀರಿದ ಕಾಲ್ಪನಿಕ ಲೋಕದ ಮನೋರಂಜನೆ.

ಮನೋರಂಜನೆ ರಾಜ್ಯ ರಾಷ್ಟ್ರೀಯ