ಚೆನ್ನೈ, ಸೆಪ್ಟೆಂಬರ್ 27:
ತಮಿಳುನಾಡಿನ ಕರೂರಿನಲ್ಲಿ ಇಂದು ನಡೆದ ನಟ-ರಾಜಕಾರಣಿ ವಿಜಯ್ ದಳಪತಿ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಮಕ್ಕಳು ಸೇರಿ 33 ಮಂದಿ ದುರ್ಮರಣ ಹೊಂದಿದ್ದಾರೆ.

ಮೃತರಲ್ಲಿ ಮೂವರು ಮಕ್ಕಳು ಹಾಗೂ ಉಳಿದವರು ವಯಸ್ಕರು ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ವಯಸ್ಕರು ವಿಜಯ್ ಅವರ ರಾಜಕೀಯ ಪಕ್ಷದ ಬೆಂಬಲಿಗರಾಗಿದ್ದು, ರ‍್ಯಾಲಿ ಸ್ಥಳಕ್ಕೆ ಕನಿಷ್ಠ ಆರು ಗಂಟೆಗಳ ಕಾಲ ನಿರೀಕ್ಷಿಸುತ್ತಿದ್ದರು. ರ‍್ಯಾಲಿ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಿ, ದುರಂತಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ತುರ್ತಾಗಿ ಕರೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಇದೇ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕರೂರ್ ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್‌ಬಾಲಾಜಿ ಅವರಿಗೆ ಸೂಚನೆ ನೀಡಿದ್ದಾರೆ.

