ಬೆಂಗಳೂರು: ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಸಚಿವ ಸಂಪುಟ ಸಭೆ 618.75 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದೆ. ಈ ಮೂಲಕ ಶಿಲಾನ್ಯಾಸಗೊಂಡು 17 ವರ್ಷ ಕಳೆದ ವಿಮಾನ ನಿಲ್ದಾಣ ಯೋಜನೆಗೆ ಮತ್ತೊಮ್ಮೆ ವೇಗ ಸಿಕ್ಕಿದೆ. 2021ರಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಸದ್ಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಆದರೆ ಪರಿಸರ ಇಲಾಖೆಯ ಅನುಮತಿ ಬಾಕಿ ಇರುವುದರಿಂದ ಉದ್ಘಾಟನೆ ತಡವಾಗಿದೆ. ಸರ್ಕಾರವು ಹಸಿರು ಪೀಠದ ತಡೆ ತೆರವುಗೊಳಿಸಲು ಕ್ರಮ ಕೈಗೊಂಡಿದ್ದು, 2025ರ ಅಂತ್ಯಕ್ಕೆ ಅಥವಾ 2026ರ ಮಾರ್ಚ್ ವೇಳೆಗೆ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ. ವಿಜಯಪುರ ನಗರದಿಂದ 15 ಕಿ.ಮೀ ದೂರದ ಮದಭಾವಿ ಗ್ರಾಮದಲ್ಲಿ 727 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣದಲ್ಲಿ ರನ್‌ವೇ, ಟ್ಯಾಕ್ಸಿ ವೇ, ಪ್ರಯಾಣಿಕರ ಟರ್ಮಿನಲ್, ಸಂಪರ್ಕ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಪೂರ್ಣಗೊಂಡಿವೆ. ಏರ್‌ಬಸ್ A320 ಮಾದರಿಯ ವಿಮಾನಗಳ ರಾತ್ರಿ ಲ್ಯಾಂಡಿಂಗ್‌ಗೂ ಸಹ ವ್ಯವಸ್ಥೆ ಕಲ್ಪಿಸಲಾಗಿದೆ.


