ದಿಸ್ಪುರ್: ಅಸ್ಸಾಂ ರಾಜ್ಯವು ಇದೀಗ ಭಾರತದ ಅಭಿವೃದ್ಧಿಯ ಎಂಜಿನ್ ಆಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. “ಇದು ನನ್ನ ರಿಮೋಟ್ ಕಂಟ್ರೋಲ್, 140 ಕೋಟಿ ಭಾರತೀಯರೇ ನನ್ನ ಏಕೈಕ ರಿಮೋಟ್ ಕಂಟ್ರೋಲ್” ಎಂದು ಪ್ರಧಾನಿ ಹೇಳಿದರು.

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ದರ್ರಾಂಗ್ ಜಿಲ್ಲೆಯಲ್ಲಿ 6,300 ಕೋಟಿ ಮೌಲ್ಯದ ಆರೋಗ್ಯ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ದರ್ರಾಂಗ್ ವೈದ್ಯಕೀಯ ಕಾಲೇಜು, ಜಿಎನ್‌ಎಂ ಶಾಲೆ, ಬಿಎಸ್‌ಸಿ ನರ್ಸಿಂಗ್ ಕಾಲೇಜು ಸೇರಿದಂತೆ 1,200 ಕೋಟಿ ವೆಚ್ಚದ ನರೇಂಗಿ–ಕುರುವಾ 2.9 ಕಿಮೀ ಉದ್ದದ ಸೇತುವೆ ಹಾಗೂ 4,530 ಕೋಟಿ ರೂ. ವೆಚ್ಚದ 118.5 ಕಿಮೀ ಉದ್ದದ ಗುವಾಹಟಿ ರಿಂಗ್ ರಸ್ತೆ ಯೋಜನೆ ಸೇರಿವೆ.
ಅಲ್ಲದೆ, ಗೋಲಾಘಾಟ್ ಜಿಲ್ಲೆಯ ನುಮಾಲಿಗಢ ಸಂಸ್ಕರಣಾಗಾರದಲ್ಲಿ 5,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಿದಿರು ಆಧಾರಿತ ಎಥೆನಾಲ್ ಸ್ಥಾವರ ಮತ್ತು 7,230 ಕೋಟಿ ರೂ. ವೆಚ್ಚದ ಪೆಟ್ರೋ ಫ್ಲೂಯಿಡೈಸ್ಡ್ ಕ್ಯಾಟಲಿಟಿಕ್ ಕ್ರ್ಯಾಕರ್ ಘಟಕವನ್ನು ಉದ್ಘಾಟಿಸಲಿದ್ದಾರೆ. ಒಟ್ಟು ಸುಮಾರು 18,000 ಕೋಟಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗುತ್ತಿದೆ.
ಅಸ್ಸಾಂ ಈಗ 13% ಬೆಳವಣಿಗೆಯ ದರದೊಂದಿಗೆ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು, ಇದು ಅಸ್ಸಾಂ ಜನರ ಪರಿಶ್ರಮ ಹಾಗೂ ಡಬಲ್ ಎಂಜಿನ್ ಸರ್ಕಾರದ ಕಾರ್ಯಪಟುತ್ವದ ಫಲಿತಾಂಶ ಎಂದು ಮೋದಿ ಅಭಿಪ್ರಾಯಪಟ್ಟರು.

