ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ

ನವದೆಹಲಿ: ತಮಿಳುನಾಡಿನ ತಿರುವಪುರ ಮೂಲದ ಹಿರಿಯ ರಾಜಕಾರಣಿ ಚಂದ್ರಾಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪ್ರಮಾಣವಚನ ಬೋಧಿಸುವರು.

ಸೆಪ್ಟೆಂಬರ್ 9ರಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ 452 ಮತಗಳನ್ನು ಪಡೆದು, ಐ.ಎನ್.ಡಿ.ಐ.ಎ. ಮೈತ್ರಿ ಅಭ್ಯರ್ಥಿ ಹಾಗೂ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಬಿ. ಸುಧರ್ಶನ ರೆಡ್ಡಿ ಅವರನ್ನು 152 ಮತಗಳ ಅಂತರದಲ್ಲಿ ಸೋಲಿಸಿದರು.

ತಿರುವಪುರದಲ್ಲಿ ಜನಿಸಿದ ರಾಧಾಕೃಷ್ಣನ್ ಅವರು ವಿದ್ಯಾರ್ಥಿ ನಾಯಕತ್ವದಿಂದಲೇ ರಾಜಕೀಯ ಪ್ರವೇಶ ಮಾಡಿದ್ದರು. ಆರ್‌ಎಸ್‌ಎಸ್ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಅವರು ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜೊತೆಗೆ ಝಾರ್ಖಂಡ್, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರಾಗಿ ಹಾಗೂ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ವೃತ್ತಿಯಿಂದ ಕೃಷಿಕ ಹಾಗೂ ಕೈಗಾರಿಕೋದ್ಯಮಿಯಾಗಿರುವ ರಾಧಾಕೃಷ್ಣನ್, ತಮ್ಮ ಅಚ್ಚುಕಟ್ಟಾದ ಸಾರ್ವಜನಿಕ ಜೀವನ, ಪ್ರಾಮಾಣಿಕತೆ ಮತ್ತು ದೃಷ್ಟಿಕೋನಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ತಮಿಳುನಾಡಿನಿಂದ ಈ ಹುದ್ದೆಗೆ ಏರಿರುವ ಮೂರನೇ ನಾಯಕನಾಗಿದ್ದಾರೆ.

ರಾಷ್ಟ್ರೀಯ