ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೊಸ ತಿರುವು ನೀಡಿದ್ದಾರೆ. ಅವರು ಸೌಜನ್ಯಳ ಸೋದರಮಾವ ವಿಠಲ ಗೌಡನೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಆರೋಪಿಸಿದ್ದಾರೆ. ವಿಠಲ ಗೌಡನಿಗೆ ಸೌಜನ್ಯ ಮೇಲೆ ಕೆಟ್ಟ ದೃಷ್ಟಿ ಇತ್ತು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ, ಆದರೆ ಸೌಜನ್ಯ ಒಪ್ಪದ ಕಾರಣ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಕೃಷ್ಣ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಕೃಷ್ಣ, ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ವಿಠಲ ಗೌಡನ ಮಂಪರು ಪರೀಕ್ಷೆ ಕೂಡ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಮುಂದಿಟ್ಟಿದ್ದಾರೆ. ಕೊಲೆ ಬೇರೆಡೆ ನಡೆದಿದ್ದು, ಬಳಿಕ ಮೃತದೇಹವನ್ನು ಇಂದಿನ ಸ್ಥಳಕ್ಕೆ ತಂದು ಹಾಕಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಿರುವ ಅವರು, ಈ ಕೃತ್ಯವನ್ನು ನೋಡಿದ್ದ ಸಂತೋಷ್ ರಾವ್ನ್ನು ಬೆದರಿಸಿ ಪ್ರಕರಣದಲ್ಲಿ ಸಿಲುಕಿಸಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ಸೌಜನ್ಯಳ ತಾಯಿ ಕುಸುಮಾವತಿ ಅವರಿಗೂ ತಮ್ಮ ಸಹೋದರ ವಿಠಲ ಗೌಡನ ಮೇಲೆಯೇ ಮೊದಲಿನಿಂದ ಅನುಮಾನವಿತ್ತು. ಈ ಕಾರಣದಿಂದಲೇ ಮಗಳ ಮೃತದೇಹವನ್ನು ನೋಡಲು ಅವರು ಹೋಗಿರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಕೊಲೆ ನಡೆದ ದಿನವೇ ವಿಠಲ ಗೌಡ ತನ್ನ ಹೋಟೆಲ್ ಕೆಲಸಕ್ಕೆ ರಜೆ ಹಾಕಿದ್ದ ಮಾಹಿತಿಯೂ ಲಭ್ಯವಾಗಿದೆ.

