ಧರ್ಮಸ್ಥಳ ಪ್ರಕರಣ: 3 ವಕೀಲರ ಜೊತೆ ಯೂಟ್ಯೂಬರ್ ಸಮೀರ್ ಎಂಡಿ ಬೆಳ್ತಂಗಡಿ ಠಾಣೆ ವಿಚಾರಣೆಗೆ ಹಾಜರು

ಧರ್ಮಸ್ಥಳ ಪ್ರಕರಣ: 3 ವಕೀಲರ ಜೊತೆ ಯೂಟ್ಯೂಬರ್ ಸಮೀರ್ ಎಂಡಿ ಬೆಳ್ತಂಗಡಿ ಠಾಣೆ ವಿಚಾರಣೆಗೆ ಹಾಜರು

ಬೆಳ್ತಂಗಡಿ (ಆ.24): ಧರ್ಮಸ್ಥಳ ವಿರುದ್ದ ಯೂಟ್ಯೂಬ್ ಮೂಲಕ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಂಡಿ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಕೋರ್ಟ್ ಸೂಚನೆಯಂತೆ ಅವರು ಮೂವರು ವಕೀಲರ ಜೊತೆ ಠಾಣೆಗೆ ಆಗಮಿಸಿದರು.

ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಸ್ವಯಂಪ್ರೇರಿತ ದೂರು ಆಧರಿಸಿ, ಬೆಳ್ತಂಗಡಿ ಪೊಲೀಸರು ಸಮೀರ್ ಎಂಡಿಗೆ ಮೂರು ಬಾರಿ ನೋಟಿಸ್ ನೀಡಿದ್ದರು. ಬಂಧನದ ಭೀತಿಯಿಂದ ಅವರು ಮಂಗಳೂರು ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಕೋರ್ಟ್ ನೀಡಿದ ಅವಧಿ ಇಂದು ಮುಕ್ತಾಯವಾಗುತ್ತಿದ್ದಂತೆ ಅವರು ವಿಚಾರಣೆಗೆ ಹಾಜರಾಗಬೇಕಾಯಿತು.

ತನಿಖಾಧಿಕಾರಿ ನಾಗೇಶ್ ಕೆ ವಿಚಾರಣೆ ನಡೆಸುತ್ತಿದ್ದಾರೆ. ಸಮೀರ್ ಎಂಡಿ ತಮ್ಮ ಯೂಟ್ಯೂಬ್ ವಿಡಿಯೋ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಠಾಣೆಗೆ ಆಗಮಿಸಿದ್ದಾರೆ.

ಆರೋಪ ಪ್ರಕಾರ, ಸಮೀರ್ ಎಂಡಿ ಎಐ ಮೂಲಕ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಧರ್ಮಸ್ಥಳದ ವಿರುದ್ಧ ಸುಳ್ಳು ಪ್ರಚಾರ ನಡೆಸಿದ್ದರು. ಧರ್ಮಸ್ಥಳದಲ್ಲಿ ನಡೆದಿದ್ದ ಶವ ಹೂತಿಟ್ಟ ಪ್ರಕರಣ, ಸೌಜನ್ಯ ಪ್ರಕರಣ, ಸುಜಾತ್ ಭಟ್–ಅನನ್ಯಾ ಭಟ್ ನಾಪತ್ತೆ ಪ್ರಕರಣಗಳನ್ನು ಆಧಾರವಿಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಜನರನ್ನು ಪ್ರಚೋದಿಸುವ ಮಾತುಗಳ ಮೂಲಕ ಧರ್ಮಸ್ಥಳದ ವಿರುದ್ಧ ದ್ವೇಷ ಬಿತ್ತುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಸಮೀರ್ ಎಂಡಿ ಅವರ ವಿಡಿಯೋಗಳ ಪರಿಣಾಮವಾಗಿ ಕೆಲವರು ಧರ್ಮಸ್ಥಳ ವಿರುದ್ದ ಪ್ರತಿಭಟನೆ ನಡೆಸಿದ್ದರೆ, ಇನ್ನು ಕೆಲವರು ಇದೇ ಸತ್ಯ ಎಂದು ನಂಬಿ ಇನ್ನಷ್ಟು ಸುಳ್ಳು ಪ್ರಚಾರಕ್ಕೆ ಕೈ ಹಾಕಿದ್ದರು. ಈ ಮೂಲಕ ಹಿಂದೂ ಹಾಗೂ ಜೈನ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ, ಸಮಾಜದ ಶಾಂತಿ ಕದಡುವ ಕೆಲಸ ನಡೆದಿದೆ ಎಂದು ದೂರು ಹೇಳುತ್ತದೆ.

ಅಪರಾಧ ರಾಜ್ಯ ರಾಷ್ಟ್ರೀಯ