ಭಾರತದ ಅತ್ಯಂತ ವಿಶ್ವಾಸಾರ್ಹ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ಚೇತೇಶ್ವರ ಪೂಜಾರಾ ಅವರು ಭಾನುವಾರ ತಮ್ಮ ವೈಭವಮಯ ಕ್ರಿಕೆಟ್ ಕರಿಯರ್‌ಗೆ ತೆರೆ ಎಳೆದಿದ್ದಾರೆ. 37 ವರ್ಷದ ಪೂಜಾರಾ ಅವರು ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿ ಘೋಷಣೆ ಮಾಡಿ, ಕಳೆದ ಬಾರಿ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ಪರ ಆಡಿದ್ದರು.


ಪೂಜಾರಾ ತಮ್ಮ ಭಾವನಾತ್ಮಕ ಸಂದೇಶದಲ್ಲಿ ಹೇಳಿದರು: “ಭಾರತೀಯ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು, ಮೈದಾನಕ್ಕೆ ಕಾಲಿಡುವ ಪ್ರತಿ ಸಾರಿ ನನ್ನ ಶ್ರೇಷ್ಠತೆಯನ್ನು ತೋರಿಸಲು ಪ್ರಯತ್ನಿಸುವುದು – ಇದಕ್ಕೆ ಅರ್ಥ ಹೇಳುವುದೇ ಅಸಾಧ್ಯ. ಆದರೆ ಎಲ್ಲ ಒಳ್ಳೆಯ ಸಂಗತಿಗಳಿಗೂ ಅಂತ್ಯವಿರುತ್ತದೆ ಎಂದು ಹೇಳುತ್ತಾರೆ, ಅಪಾರ ಕೃತಜ್ಞತೆಯಿಂದ ನಾನು ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಬರೆದು ಕೊಂಡರು.
2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪ್ರವೇಶಿಸಿದ ಪೂಜಾರಾ, ಒಟ್ಟು 103 ಟೆಸ್ಟ್ ಪಂದ್ಯಗಳಲ್ಲಿ 7,195 ರನ್ ಗಳಿಸಿದ್ದು, ಅವರ ಬ್ಯಾಟಿಂಗ್ ಸರಾಸರಿ 43.61 ಆಗಿದೆ. ಅವರ ಖಾತೆಯಲ್ಲಿ 19 ಶತಕಗಳು ಮತ್ತು 35 ಅರ್ಧ ಶತಕ ಇವೆ. ಅವರ ಗರಿಷ್ಠ ಟೆಸ್ಟ್ ಸ್ಕೋರ್ 206.
ಅಷ್ಟೇ ಅಲ್ಲದೆ, ಪೂಜಾರಾ ಭಾರತ ಪರವಾಗಿ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಆಡಿದ್ದು, 51 ರನ್ ಗಳಿಸಿದ್ದರು.
ತಮ್ಮ ವಿದಾಯ ಸಂದೇಶದಲ್ಲಿ ಪೂಜಾರಾ ಸಹ ಆಟಗಾರರು, ತರಬೇತುದಾರರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿ, “ಇವರ ಪ್ರೋತ್ಸಾಹ ಇಲ್ಲದಿದ್ದರೆ ನನ್ನ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

