ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ಹಿರಿಯಡ್ಕ ಜೈಲಿನಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಶನಿವಾರ (ಆ.23) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಆ.21ರಂದು ಪೊಲೀಸರು ಅವರನ್ನು ಬಂಧಿಸಿದ್ದರು. ಆ ದಿನವೇ ಕೋರ್ಟ್ ಎದುರು ಹಾಜರುಪಡಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಆದರೆ ಆ.23ರಂದು ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ವಿಚಾರಣೆ ವೇಳೆ ಸಹಾಯಕ ಸರಕಾರಿ ಅಭಿಯೋಜಕರು ಆರೋಪಿ ಪೊಲೀಸ್ ಕಸ್ಟಡಿಗೆ ನೀಡಲು ಮನವಿ ಮಾಡಿದ್ದರು.
ಮಧ್ಯಾಹ್ನದಲ್ಲಿ ತಿಮರೋಡಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ ವೇಳೆ ನ್ಯಾಯಾಧೀಶರು ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ನಂತರ ಮಧ್ಯಾಹ್ನ 3.30ಕ್ಕೆ ಮರು ಹಾಜರುಪಡಿಸುವಂತೆ ಸೂಚನೆ ನೀಡಲಾಯಿತು

