ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಅನಾಮಿಕ ದೂರು ಆಧಾರವಾಗಿ ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಕಳೆದ 15 ದಿನಗಳಿಂದ ತನಿಖೆ ಮುಂದುವರೆಸುತ್ತಿದೆ. ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ಎಸ್ಐಟಿ ಒಂದು ಅಸ್ಥಿಪಂಜರ ಹಾಗೂ ಕೆಲ ಮೂಳೆಗಳನ್ನು ಮಾತ್ರ ಪತ್ತೆಹಚ್ಚಿದ್ದು, ನೂರಾರು ಶವಗಳ ಆರೋಪಕ್ಕೆ ಸಾಕ್ಷ್ಯ ದೊರಕಿಲ್ಲ.

ಈ ಬೆಳವಣಿಗೆಗಳ ನಡುವೆ ಧರ್ಮಸ್ಥಳದ ಮೇಲೆ ಅಪಪ್ರಚಾರ ನಡೆಯುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಜ್ಯ ವಿಧಾನಸಭೆಯಲ್ಲೂ ಚರ್ಚೆ ನಡೆದಿದೆ. ಇತ್ತೀಚೆಗೆ ತನಕ ಮೌನ ಪಾಲಿಸಿಕೊಂಡಿದ್ದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
“ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ ಎನ್ನುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಲ್ಪಿತ. ಇದರಿಂದ ನನಗೆ, ನಮ್ಮ ಕ್ಷೇತ್ರಕ್ಕೆ ಮತ್ತು ಭಕ್ತರಿಗೆ ನೋವು ಉಂಟಾಗಿದೆ” ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಹೆಗ್ಗಡೆ ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾ, “ನನಗೆ ಮೂವರು ಸೋದರರು, ಓರ್ವ ಸೋದರಿ ಇದ್ದಾರೆ. ನನ್ನ ಸೋದರರಲ್ಲಿ ಒಬ್ಬರು ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ನೋಡಿಕೊಳ್ತಾರೆ. ಮತ್ತೊಬ್ಬರು ಧರ್ಮಸ್ಥಳದಲ್ಲೇ ಆಡಳಿತ ಕಾರ್ಯ ನೋಡಿಕೊಳ್ತಾರೆ. ಸೋದರಿ ಧಾರವಾಡದಲ್ಲಿದ್ದು, ನನ್ನ ಬಾವ ಧಾರವಾಡ ಮೆಡಿಕಲ್ ಕಾಲೇಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದಾರೆ” ಎಂದರು.ಎಸ್ಐಟಿ ತನಿಖೆ ಕುರಿತು ಮಾತನಾಡಿದ ಅವರು, “ನಾವು ಆರಂಭದಿಂದಲೇ ತನಿಖಾ ತಂಡವನ್ನು ಸ್ವಾಗತಿಸಿದ್ದೇವೆ. ಭಕ್ತರಲ್ಲಿ ಅನುಮಾನ, ಗೊಂದಲ ಹುಟ್ಟಿಸಿರುವ ಈ ಪ್ರಕರಣಕ್ಕೆ ಸೂಕ್ತ ತನಿಖೆಯ ಮೂಲಕ ಪರಿಹಾರ ದೊರೆಯಲಿ ಎಂಬುದು ನಮ್ಮ ಆಶಯ” ಎಂದು ಸ್ಪಷ್ಟಪಡಿಸಿದರು.ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮೊದಲ ಬಾರಿಗೆ ಮೌನ ಮುರಿದು ನೀಡಿರುವ ಈ ಪ್ರತಿಕ್ರಿಯೆಯಲ್ಲಿ, ಎಸ್ಐಟಿ ತನಿಖೆಗೆ ಬೆಂಬಲ ಸೂಚಿಸಿರುವುದು ಮುಖ್ಯ ಅಂಶವಾಗಿದೆ.

