ತುಳುನಾಡಿನಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮತ್ತು ಕೋರ್ಟು ಗಳ ಮೇಲೆ ನಂಬಿಕೆ ಇರುವುದಕ್ಕಿಂತ ಹೆಚ್ಚು ಇಲ್ಲಿನ ದೈವಗಳ ಮೇಲೆ ನಂಬಿಕೆ ಇರುವುದು ವಾಡಿಕೆ. ಕಾನೂನು ಪ್ರಕಾರ ನ್ಯಾಯ ಲಭಿಸದೆ ಇದ್ದಾಗ ಕೊನೆಯಲ್ಲಿ ದೈವಗಳ ಮೊರೆ ಹೋಗುವುದು ಇಲ್ಲಿನ ಜನರ ನಂಬಿಕೆ. ಅಂಥದೇ ಒಂದು ಪ್ರಸಂಗ ಈಗ ನಡೆಯುತಿದೆ.

ಒಂದು ಕಡೆ ಧರ್ಮಸ್ಥಳ ಅತ್ಯಾಚಾರ ಕೊಲೆಗಳ ಪ್ರಕರಣದಲ್ಲಿ ಎಸ್ ಐ ಟಿ ಅನಾಮಿಕ ಸಾಕ್ಷಿದಾರನನ್ನು ಕರೆದು ಕೊಂಡು ಅಲ್ಲಲ್ಲಿ ಗುಂಡಿ ತೋಡಿ ಅದನ್ನು ಮುಚ್ಚಿ ಮುಂದೆ ಸಾಗುತ್ತಿದ್ದಾರೆ. ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಜುಟ್ಟು ಇರುವ ತೆಂಗಿನಕಾಯಿ ಇಟ್ಟು ಪ್ರಾರ್ಥಿಸಿ ಎನ್ನುವ ಸಂದೇಶ ಈಗ ವೈರಲ್ ಆಗುತ್ತಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕಾನೂನು ಪ್ರಕಾರ ನ್ಯಾಯ ಲಭಿಸದೆ ಇರುವ ಕಾರಣ ಅಂತಿಮವಾಗಿ ದೈವಗಳೇ ಅಪರಾಧಿಗಳನ್ನು ಶಿಕ್ಷಿಸಲಿ ಎಂದು ಈ ಅಭಿಯಾನ ಶುರುವಾದಂತಿದೆ. ವೈರಲ್ ಆಗಿರುವ ಸಂದೇಶ ಹೀಗಿದೆ.
ಧರ್ಮಸ್ಥಳದ ಭಕ್ತರೇ,
ಒಂದು ಜುಟ್ಟು ಇರುವ ತೆಂಗಿನಕಾಯಿಯನ್ನ ಮನೆಯಲ್ಲಿಟ್ಟು ಅಣ್ಣಪ್ಪನನ್ನ ಪ್ರಾರ್ಥಿಸಿ ನಂತರ ಧರ್ಮಸ್ಥಳಕ್ಕೆ ಬರುವಾಗ ಅದನ್ನ ಬೆಟ್ಟದಲ್ಲಿರುವ ಅಣ್ಣಪ್ಪನ ಮುಂದೆ ಇಟ್ಟು ಹೀಗೆ ಪ್ರಾರ್ಥಿಸಿ…
“ಓ ಅಣ್ಣಪ್ಪ ..ಸೌಜನ್ಯಳನ್ನು ಯಾರು ಕೊಂದರೂ ಹಾಗೂ ಯಾರೆಲ್ಲಾ ಅವಳ ಹೆಸರನ್ನ ಬಳಸಿಕೊಂಡು ಅಥವಾ ಬುರುಡೆ ಕಥೆ ಕಟ್ಟಿ ಧರ್ಮಸ್ಥಳವನ್ನ ಅಪಪ್ರಚಾರಕ್ಕೆ ಈಡು ಮಾಡಿದರೋ ಅವರನ್ನೆಲ್ಲಾ ನೀನು ಜನರ ಕಣ್ಣಿಗೆ ಕಾಣುವಂಥ ನಿದರ್ಶನ ಕೊಟ್ಟು ಶಿಕ್ಷಿಸು ಅಂತಾ”
ಸಾಮೂಹಿಕ ಪ್ರಾರ್ಥನೆಗೆ ಒಂದು ಶಕ್ತಿ ಇದೆ ಅದನ್ನ ಮಾಡಿ ತೋರಿಸೋಣ..
ಈ ಸಂದೇಶವನ್ನು ನೋಡುವಾಗ ಎಸ್ ಐ ಟಿ ತನಿಖೆಯಿಂದ ಕೂಡ ನೈಜ ಅಪರಾಧಿಗಳು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡುವ ಸಾಧ್ಯತೆ ಇಲ್ಲ ಎಂದು ಅನಿಸುತ್ತಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.

