ಹರಿದ್ವಾರದ ಮಾನಸ ದೇವಿ ದೇಗುಲದ ಬಳಿ ಭೀಕರ ಕಾಲ್ತುಳಿತ – ಆರು ಮಂದಿ ಭಕ್ತರ ದುರ್ಮರಣ, ಹಲವು ಮಂದಿಗೆ ಗಾಯ

ಹರಿದ್ವಾರದ ಮಾನಸ ದೇವಿ ದೇಗುಲದ ಬಳಿ ಭೀಕರ ಕಾಲ್ತುಳಿತ – ಆರು ಮಂದಿ ಭಕ್ತರ ದುರ್ಮರಣ, ಹಲವು ಮಂದಿಗೆ ಗಾಯ

ಹರಿದ್ವಾರ (ಉತ್ತರಾಖಂಡ): ದಟ್ಟ ಭಕ್ತಸಂದಣಿಯಿಂದ ಹರಿದ್ವಾರದ ಪ್ರಸಿದ್ಧ ಮಾನಸ ದೇವಿ ದೇವಸ್ಥಾನಕ್ಕೆ ತೆರಳುವ ದಾರಿ ಮೇಲಿನ ಮೆಟ್ಟಿಲುಗಳಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ, ಆರು ಮಂದಿ ಭಕ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸುಮಾರು 35 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಸಿಂಗ್ ಡೋಬಾಲ್ ತಿಳಿಸಿದ್ದಾರೆ.

ಘಟನೆ ಸಂಭವಿಸಿದ ತಕ್ಷಣ ಸ್ಥಳಕ್ಕೆ SDRF ಹಾಗೂ ಸ್ಥಳೀಯ ಪೊಲೀಸರು ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಗೊಂಡವರನ್ನು ತುರ್ತಾಗಿ ಆಂಬ್ಯುಲೆನ್ಸಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಶ್ರಾವಣ ಮಾಸದಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡುವ ಸಂಖ್ಯೆ ಹೆಚ್ಚಿರುತ್ತದೆ. ಈ ಭಕ್ತಸಂದಣಿಯ ನಡುವೆ ಭೀಕರ ಕಾಲ್ತುಳಿತ ಸಂಭವಿಸಿತು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, “ಹರಿದ್ವಾರದ ಮಾನಸ ದೇವಿ ದೇವಸ್ಥಾನದ ಮಾರ್ಗದಲ್ಲಿ ಸಂಭವಿಸಿದ ಕಾಲ್ತುಳಿತದ ಸುದ್ದಿ ಅತ್ಯಂತ ದುಃಖದಾಯಕವಾಗಿದೆ. SDRF, ಸ್ಥಳೀಯ ಪೊಲೀಸ್ ಪಡೆಗಳು ಹಾಗೂ ಇತರೆ ರಕ್ಷಣಾ ತಂಡಗಳು ಕೂಡಲೇ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮಾನಸ ದೇವಿಗೆ ಎಲ್ಲರ ಸುಸ್ಥಿತಿಗೆ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಪೊಲೀಸ್ ಇಲಾಖೆ ಭಕ್ತರ ಸುರಕ್ಷತೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರೀಯ