ಭಾರತ ಸರ್ಕಾರ ಡಿಜಿಟಲ್ ಮಾಧ್ಯಮದ ಶುದ್ಧತೆಗೆ ಪ್ರಾಮುಖ್ಯತೆ ನೀಡುತ್ತಾ, ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 25 ಒಟಿಟಿ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಪ್ಲಾಟ್‌ಫಾರ್ಮ್‌ಗಳು ಅಡಲ್ಟ್ ಕಂಟೆಂಟ್, ಅಶ್ಲೀಲ ಜಾಹಿರಾತುಗಳು, ಹಾಗೂ ಮಹಿಳೆಯರನ್ನು ಅವಮಾನಿಸುವ ರೀತಿಯ ದೃಶ್ಯಗಳನ್ನು ಹಬ್ಬಿಸುತ್ತಿದ್ದವು ಎಂಬ ಆರೋಪದ ಮೇರೆಗೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ತಕ್ಷಣವೇ ಈ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಪ್ರವೇಶ ತಡೆಯಲು ಸೂಚನೆ ನೀಡಲಾಗಿದೆ.

ಈ ಆ್ಯಪ್‌ಗಳು ಮಕ್ಕಳಿಗೆ ಕೂಡಾ ಸುಲಭವಾಗಿ ಹಾನಿಕಾರಕ ಕಂಟೆಂಟ್ ಒದಗಿಸುತ್ತಿದ್ದವು ಎಂಬ ಆಧಾರದ ಮೇಲೆ, ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ತರುವಂತದ್ದಾಗಿ ಸರ್ಕಾರ ಪರಿಗಣಿಸಿದೆ. ಇತ್ತೀಚೆಗೆ ‘ಉಲ್ಲು ಆಪ್’ನ ‘ಹೌಸ್ ಅರೆಸ್ಟ್’ ಶೋನಲ್ಲಿ ನಡೆದ ವಿವಾದಿತ ಟಾಸ್ಕ್‌ಗಳಿಂದ ಸಹ ಪರಿಸ್ಥಿತಿ ಗಂಭೀರವಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಹಿನ್ನೆಲೆಗೂ ಉತ್ತರವಾಗಿ, ಸರಕಾರ ಇದೀಗ ತೀವ್ರ ನಿರ್ಧಾರ ಕೈಗೊಂಡಿದೆ.
ಬ್ಯಾನ್‌ಗೆ ಒಳಪಟ್ಟ ಪ್ರಮುಖ ಆ್ಯಪ್‌ಗಳಲ್ಲಿ ಉಲ್ಲು, ಆಲ್ಟ್, ಬಿಗ್ ಶಾಟ್ಸ್, ಡೆಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಕಂಗನ್, ಗುಲಾಬ್, ಬುಲ್, ಜಲ್ವಾ ಸೇರಿದಂತೆ ಹಲವು ಪ್ರಸಿದ್ಧ ಹೆಸರಿರುವ ಪ್ಲಾಟ್‌ಫಾರ್ಮ್‌ಗಳಿವೆ. ಈ ಆ್ಯಪ್‌ಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಸಹ ಭಾರತದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ತಡೆಯಲಾಗಿದೆ.