ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಮಾನ್ ಕೊನೆಗೂ ಎನ್‌ಐಎ ಬಲೆಗೆ ಬಿದ್ದಿದ್ದಾನೆ. ಕತಾರ್‌ನಿಂದ ಕೇರಳದ ಕಣ್ಣೂರಿಗೆ ಬಂದ ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಅವನನ್ನು ಬಂಧಿಸಿದ್ದಾರೆ.


2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಈ ಕ್ರೂರ ಹತ್ಯೆ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಎನ್‌ಐಎ ತನಿಖೆ ಕೈಗೊಂಡಿದ್ದು, ಈವರೆಗೆ ಒಟ್ಟು 28 ಮಂದಿ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದೆ. ಅವರಲ್ಲಿ 6 ಮಂದಿ ಪರಾರಿಯಾಗಿದ್ದರು.
ಅಬ್ದುಲ್ ರಹಮಾನ್ ಸಹಿತ ಈ ಆರು ಮಂದಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. ಇತ್ತೀಚೆಗಷ್ಟೇ ಏಪ್ರಿಲ್‌ನಲ್ಲಿ ಎನ್‌ಐಎ ನಾಲ್ವರು ಪ್ರಮುಖ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ತದನಂತರ ಇದೀಗ ಅಬ್ದುಲ್ ರಹಮಾನ್‌ನ ಬಂಧನೆಯೊಂದಿಗೆ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಾಯಕರ ನಿರ್ದೇಶನದಂತೆ ಈ ಹತ್ಯೆ ಸಂಚು ರೂಪಿಸಲಾಗಿತ್ತು ಎನ್ನುವುದು ತನಿಖೆಯಿಂದ ಹೊರಬಂದಿದೆ. ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶವೇ ಈ ಕೊಲೆಯ ಹಿಂದೆ ಇದ್ದದ್ದು ಎಂದು ಎನ್‌ಐಎ ತಿಳಿಸಿದೆ.