ಪಾಕಿಸ್ತಾನದಲ್ಲಿ ಒಂದೇ ದಿನ ಭೂಮಿ ತ್ರಿವಳಿ ಕಂಪನ – ಜನರಲ್ಲಿ ಆತಂಕ

ಪಾಕಿಸ್ತಾನದಲ್ಲಿ ಒಂದೇ ದಿನ ಭೂಮಿ ತ್ರಿವಳಿ ಕಂಪನ – ಜನರಲ್ಲಿ ಆತಂಕ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶನಿವಾರ (ಜೂನ್ 29, 2025) ಒಂದೇ ದಿನ ಮೂರು ಬಾರಿ ಭೂಕಂಪ ಸಂಭವಿಸಿದ ಪರಿಣಾಮ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ರಾಷ್ಟ್ರೀಯ ಭೂಕಂಪನ ಕೇಂದ್ರ ನೀಡಿದ ಮಾಹಿತಿಯಂತೆ, ಈ ಮೂರು ಭೂಕಂಪಗಳ ತೀವ್ರತೆ ಕ್ರಮವಾಗಿ 5.2, 4.5 ಮತ್ತು 3.8 ರಷ್ಟಾಗಿತ್ತು. ಈ ಭೂಕಂಪಗಳು ಪಾಕಿಸ್ತಾನದ ವಿಸ್ತಾರವಾದ ಪ್ರದೇಶಗಳಲ್ಲಿ ಅನುಭವವಾಗಿದ್ದು, ಅಲ್ಲಿನ ಜನಸಾಮಾನ್ಯರಲ್ಲಿ ಭಯ ಭೀತಿಯ ಸ್ಥಿತಿ ಉಂಟಾಗಿದೆ.

ಮೊದಲ ಭೂಕಂಪವು ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 3.54ಕ್ಕೆ ಸಂಭವಿಸಿದ್ದು, ಇದರ ತೀವ್ರತೆ 5.2 ರಷ್ಟಾಗಿತ್ತು. ಇದರ ಕೇಂದ್ರಬಿಂದು 30.25 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 69.82 ಡಿಗ್ರಿ ಪೂರ್ವ ರೇಖಾಂಶದ ಸಮೀಪ, ಸಮುದ್ರಮಟ್ಟದಿಂದ 150 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಈ ಭೂಕಂಪದಿಂದ ತಕ್ಷಣದ ಹಾನಿ ಅಥವಾ ಪ್ರಾಣಹಾನಿಯ ವಿವರಗಳು ಲಭ್ಯವಾಗಿಲ್ಲ.

ಇದಾದ ಬಳಿಕ ಬೆಳಗ್ಗೆ 8.02ಕ್ಕೆ ಎರಡನೇ ಭೂಕಂಪನ ಸಂಭವಿಸಿತು. ಇದರ ತೀವ್ರತೆ 4.5 ರಷ್ಟಾಗಿದ್ದು, ಜನರು ಇನ್ನೂ ಮೊದಲ ಭೂಕಂಪದಿಂದ ಚೇತರಿಸಿಕೊಳ್ಳುವ ಮೊದಲು ಮತ್ತೊಂದು ಕಂಪನವನ್ನು ಅನುಭವಿಸಿದರು.

ಮೂರನೇ ಭೂಕಂಪವು ಬೆಳಿಗ್ಗೆ 11.21ಕ್ಕೆ ಸಂಭವಿಸಿತು ಮತ್ತು ಇದರ ತೀವ್ರತೆ 3.8 ರಷ್ಟಾಗಿತ್ತು.ಒಂದೇ ದಿನದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಈ ಘಟನೆ ಪಾಕಿಸ್ತಾನದ ಜನರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ. ಹಲವರು ಭದ್ರ ಸ್ಥಳಗಳಿಗೆ ಓಡಿದ್ದಾರೆ. ಭೂಕಂಪದಿಂದ ಉಂಟಾದ ನಷ್ಟಗಳ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಅಂತರಾಷ್ಟ್ರೀಯ