ಜೂನ್ 18, 2025 – ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಪ್ರವಾಸದ ಆಹ್ವಾನವನ್ನು ನಿರಾಕರಿಸಿ, ಬದಲಿಗೆ ಅವರಿಗೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಬರಲು ಆಹ್ವಾನ ನೀಡಿದರು.


ಅಧ್ಯಕ್ಷ ಟ್ರಂಪ್ ಅವರು, ಕಾನನಾಸ್ಕಿಸ್ನಲ್ಲಿ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ಮೋದಿ ಅವರನ್ನು ಅಮೆರಿಕಕ್ಕೆ ಆಹ್ವಾನಿಸಿದ್ದರು. ಆದರೆ ಮೋದಿ ಅವರು ತಮ್ಮ ಪೂರ್ವನಿಯೋಜಿತ ವೇಳಾಪಟ್ಟಿಯ ಕಾರಣದಿಂದ ಆ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬದಲಾಗಿ ಅವರು ಟ್ರಂಪ್ರನ್ನು ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಬರುವಂತೆ ಆಹ್ವಾನಿಸಿದರು.
ಮಂಗಳವಾರ 35 ನಿಮಿಷಗಳ ಕಾಲ ನಡೆದ ದೂರವಾಣಿ ಸಂಭಾಷಣೆಯಲ್ಲಿ, ಪ್ರಧಾನಿ ಮೋದಿ ಅವರು “ಆಪರೇಷನ್ ಸಿಂಧೂರ” ಕುರಿತು ಟ್ರಂಪ್ ಅವರಿಗೆ ವಿವರ ನೀಡಿದ್ದು, ಈ ಕಾರ್ಯಾಚರಣೆ ಪಾಕಿಸ್ತಾನದ ಮನವಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಅಮೆರಿಕದ ಮಧ್ಯಸ್ಥಿಕೆ ಅಥವಾ ವ್ಯಾಪಾರ ಒಪ್ಪಂದದ ಆಧಾರದಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗಿಲ್ಲ ಎಂದು ಅವರು ತಿಳಿಸಿದರು.