ಇಂದಿನಿಂದ ಕೋರ್ಟ್‌ನಲ್ಲಿ ವಕೀಲರು ಕಪ್ಪು ಕೋಟ್ ಧರಿಸುವ ಅಗತ್ಯವಿಲ್ಲ

ಇಂದಿನಿಂದ ಕೋರ್ಟ್‌ನಲ್ಲಿ ವಕೀಲರು ಕಪ್ಪು ಕೋಟ್ ಧರಿಸುವ ಅಗತ್ಯವಿಲ್ಲ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂದಿನಿಂದ ಅಂದರೆ ಮಾರ್ಚ್ 15 ರಿಂದ ಮೇ 31 ರವರೆಗೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವಕೀಲರು ಕಪ್ಪು ಕೋಟ್ ಧರಿಸುವ ಅನಿವಾರ್ಯತೆಯಿಂದ ವಿನಾಯಿತಿ ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಅಧಿಸೂಚನೆ ಹೊರಡಿಸಿದೆ.

ವಕೀಲರ ಮನವಿ ಮತ್ತು ಹೈಕೋರ್ಟ್ ನಿರ್ಧಾರ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರು ಮಾರ್ಚ್ 3 ಮತ್ತು 4 ರಂದು ಹೈ ಕೋರ್ಟ್‌ಗೆ ಈ ಕುರಿತು ಮನವಿ ಸಲ್ಲಿಸಿದ್ದರು. ಹವಾನಿಯಂತ್ರಿತ (A/C) ವ್ಯವಸ್ಥೆ ಇಲ್ಲದ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಿಳಿ ಶರ್ಟ್ ಮೇಲೆ ಕಪ್ಪು ಕೋಟ್ ಧರಿಸುವುದು ತಾಪಮಾನ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಕಷ್ಟಕರವಾಗಿದೆ ಎಂಬುದನ್ನು ಈ ಮನವಿಯಲ್ಲಿ ಉಲ್ಲೇಖಿಸಿದ್ದರು.

ಈ ಮನವಿಯನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ಪೀಠವು  ಈ ವಿನಾಯಿತಿಯನ್ನು ಒಪ್ಪಿಕೊಂಡು ನಿರ್ಧಾರ ಕೈಗೊಂಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಈ ಅಧಿಸೂಚನೆ ಹೊರಡಿಸಿದ್ದು, ಈ ವಿನಾಯಿತಿಯು ಕೇವಲ ಕಪ್ಪು ಕೋಟ್‌ಗೆ ಮಾತ್ರ ಅನ್ವಯಿಸುತ್ತದೆ. ಆದರೆ, ಬಿಳಿ ಶರ್ಟ್ ಮತ್ತು ನೆಕ್ ಬ್ಯಾಂಡ್ ಧರಿಸುವುದು ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ.

ಬೇಸಿಗೆ ತಾಪ ಮತ್ತು ವಿನಾಯಿತಿಯ ಅಗತ್ಯತೆ

ಈ ವರ್ಷ ಬೇಸಿಗೆ ತೀವ್ರವಾಗಿದ್ದು, ದಿನೇ ದಿನೇ ತಾಪಮಾನ ಹೆಚ್ಚುತ್ತಿದೆ. ವಕೀಲರು ಕಪ್ಪು ಕೋಟ್ ಧರಿಸುವುದರಿಂದ ತಾಪಮಾನವು ಇನ್ನೂ ಹೆಚ್ಚಾಗುತ್ತದೆ. ಹೀಗಾಗಿ, ನ್ಯಾಯಾಲಯಗಳ ಬೇಸಿಗೆ ರಜಾ ಅವಧಿ ಮುಗಿಯುವವರೆಗೆ ಈ ವಿನಾಯಿತಿಯನ್ನು ನೀಡಲಾಗಿದೆ.

ಹೈಕೋರ್ಟ್ ತೀರ್ಮಾನವನ್ನು ವಕೀಲ ಸಮುದಾಯ ಮನಪೂರ್ವಕವಾಗಿ ಸ್ವಾಗತಿಸಿದೆ. ಈ ಆದೇಶದಿಂದ ನ್ಯಾಯಾಂಗ ವಲಯದಲ್ಲಿನ ವಕೀಲರಿಗೆ ಬೇಸಿಗೆ ಉಷ್ಣತೆಗೆ ತತ್ತರಿಸದೆ ತಮ್ಮ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ. ಈ ನಿಯಮ ಇಂದಿನಿಂದ ಅಂದರೆ ಮಾರ್ಚ್ 15 ರಿಂದ ಮೇ 31 ರವರೆಗೆ ಅನುಷ್ಠಾನಗೊಳ್ಳಲಿದ್ದು, ಬಳಿಕ ಹೈಕೋರ್ಟ್ ಈ ನಿರ್ಧಾರವನ್ನು ಪುನರ್ ವಿಮರ್ಶೆ ಮಾಡಲಿದೆ.

ರಾಜ್ಯ