ಲಕ್ಷ್ಮೇಶ್ವರದಲ್ಲಿ ರಾಸಾಯನಿಕ ಬಣ್ಣದ ದಾಳಿ: ಎಂಟು ಶಾಲಾ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಲಕ್ಷ್ಮೇಶ್ವರದಲ್ಲಿ ರಾಸಾಯನಿಕ ಬಣ್ಣದ ದಾಳಿ: ಎಂಟು ಶಾಲಾ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಾಡಿದ ಕೃತ್ಯದಿಂದ ಎಂಟು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಗದಗ ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಎಂಟು ಶಾಲಾ ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಗಳು ರಾಸಾಯನಿಕ ಮಿಶ್ರಿತ ಬಣ್ಣವನ್ನು ಎರಚಿ ಪರಾರಿಯಾದ ಘಟನೆ ನಡೆದಿದೆ. ಈ ಘಟನೆ ಬಳಿಕ ವಿದ್ಯಾರ್ಥಿನಿಯರಿಗೆ ಎದೆನೋವು, ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪರಿಚಿತ ವ್ಯಕ್ತಿಗಳ ಗುಂಪು ಬೈಕ್‌ಗಳಲ್ಲಿ ಬಂದು ವಿದ್ಯಾರ್ಥಿನಿಯರ ಮೇಲೆ ರಾಸಾಯನಿಕ ಬಣ್ಣಗಳನ್ನು ಎರಚಿ ಪರಾರಿಯಾಗಿದೆ. ಬಣ್ಣದಲ್ಲಿ ವಿಷಕಾರಿ ಅಂಶಗಳು ಇದ್ದ ಕಾರಣ, ತೀವ್ರತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು.

ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೋಳಿ ಬಣ್ಣದ ದಾಳಿಯಿಂದಾದ ತೀವ್ರ ತೊಂದರೆಗಳಿಂದಾಗಿ ವಿದ್ಯಾರ್ಥಿನಿಯರು ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಯ ಪ್ರಕಾರ,  ಉಸಿರಾಟ ತೊಂದರೆ, ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದೆ.

ಪೋಲಿಸ್ ತನಿಖೆ ಆರಂಭ

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಿಚಿತ ಆರೋಪಿಗಳನ್ನು ಪತ್ತೆ ಮಾಡಲು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆ ಭೇಟಿ ನೀಡಿ,ಈ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಫೊರೆನ್ಸಿಕ್ ವರದಿ ಬಹಿರಂಗ

ಆರೋಪಿಗಳು ಎರಚಿದ ರಾಸಾಯನಿಕ ಬಣ್ಣದಲ್ಲಿ ಗೋಮಯ,  ಮೊಟ್ಟೆ, ಫೀನಾಲ್ ಮತ್ತು ಕೃತಕ ಬಣ್ಣಗಳ ಮಿಶ್ರಣ ಪತ್ತೆಯಾಗಿದೆ. ಈ ವಸ್ತುಗಳು ಸೇರಿಕೊಂಡ ಮಲಿನ ಗಾಳಿಯನ್ನು ಉಸಿರಾಡಿದ ಪರಿಣಾಮ ಉಸಿರಾಟದ ತೊಂದರೆಗಳು ತೀವ್ರಗೊಂಡಿವೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಭರವಸೆ

ಸ್ಥಳೀಯ ಜನತೆ ಮತ್ತು ವಿದ್ಯಾರ್ಥಿನಿಯರ ಕುಟುಂಬಸ್ಥರು ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಅಪರಾಧ