
ಈ ಸೃಷ್ಟಿಗೊಂದು ಒಂದು ನಾಡಿ ಇದೆ – ಅಸ್ತಿತ್ವವೆಂಬ ವಸ್ತ್ರದಂತೆ ನೇಯ್ದ ಹೃದಯದ ಬಡಿತವಿದೆ. ಅದುವೇ ನೈಸರ್ಗಿಕ ಲಯ. ಆಲಿಸಿದಷ್ಟೂ ಸಾಕೆನಿಸದ ಸಂಗೀತ, ಅಲೆಗಳ ಏರಿಳಿತಗಳನ್ನು, ಪಕ್ಷಿಗಳ ವಲಸೆಯನ್ನು, ಬೆಳಗಾಗುತ್ತಲೇ ಹೂಗಳು ಅರಳುವುದನ್ನು ನಡೆಸುವ ಒಂದು ದರ್ಶನ. ಇದು ಒಂದು ಮಾಂತ್ರಿಕ ನಾದ, ಋತುಗಳ ಚಕ್ರವನ್ನು, ಜೀವನ – ಮರಣದ ಪಾಠವನ್ನು, ಬ್ರಹ್ಮಾಂಡದ ನೃತ್ಯವನ್ನು ನಿರ್ದೇಶಿಸುವ ನಿಗೂಢ ರಾಗ.


ಬೆಳಗಾಗುತ್ತಾಲೇ, ಈ ಲಯ ಅತ್ಯಂತ ಜೀವಂತವೆಂದು ಭಾಸವಾಗುತ್ತದೆ. ಆ ಪ್ರಥಮ ಸೂರ್ಯಕಿರಣವು ಭೂಮಿಯನ್ನು ಸ್ಪರ್ಷಿಸುತ್ತಿದ್ದಂತೆ, ಆಗಸದಲ್ಲಿ ಚಿನ್ನದ ಬಣ್ಣದ ಜೊತೆ ಕಡು ನೇರಳೆ ಬಣ್ಣವು ರಂಗೋಲಿಯನ್ನಿಡುತ್ತದೆ. ಜಗತ್ತು ಜಾಗೃತವಾಗುತ್ತದೆ, ಕತ್ತಲು ಸರಿದು, ಬೆಳಕನ್ನು ಮನಸಾರೆ ಬರಮಾಡಿಕೊಳ್ಳುತ್ತದೆ. ಪಕ್ಷಿಗಳ ಚಿಲಿಪಿಲಿಯೊಂದಿಗೆ ಪ್ರಕೃತಿಯಲ್ಲಿನ ಮೌನ ಮಾಯವಾಗುತ್ತದೆ. ಅವುಗಳ ಮಾಧುರ್ಯವು ಮುಂಜಾನೆಯ ತಂಗಾಳಿಯಲ್ಲಿ ಎಲೆಗಳ ಮರ್ಮರದೊಂದಿಗೆ ಸಮನ್ವಯಗೊಳ್ಳುತ್ತದೆ. ಭೂಮಿಯ ಪುನರ್ಜನ್ಮದ ಶಕ್ತಿಯು ತಮ್ಮದೇ ಮುಷ್ಠಿಯಲ್ಲಿರುವಂತೆ ಮಂಜಿನ ಹನಿಗಳು ಮಿನುಗುತ್ತವೆ. ಸ್ವತಃ ಭೂಮಿಯೇ ತನ್ನ ಮೊದಲನೇ ಉಸಿರನ್ನು ಆಳವಾಗಿ ತೆಗೆದುಕೊಳ್ಳುತ್ತಿದೆಯೇನೋ ಎನ್ನುವಷ್ಟು ಗಾಳಿ ಶುದ್ಧವಾಗಿರುತ್ತದೆ.
ಆದರೆ ಈ ಲಯ ಕೇವಲ ಒಂದು ಕವಿತೆಯಷ್ಟೇ ಅಲ್ಲ, ಇದು ಒಂದು ವಿಜ್ಞಾನ. ಇದೇ ನಮ್ಮ ನಿದ್ರೆ ಮತ್ತು ಎಚ್ಚರವನ್ನು ನಿಯಂತ್ರಿಸುವ ಸರ್ಕೇಡಿಯನ್ ರಿದಮ್. ಇದು ಸಮುದ್ರದ ಅಲೆಗಳನ್ನು ಹಾಗೂ ಮಾನವನ ವರ್ತನೆಯನ್ನು ಪ್ರಭಾವಿತಗೊಳಿಸುವ ಒಂದು ಚಾಂದ್ರಮಾನ ಚಕ್ರ. ಬೇಟೆಗಾರ ಮತ್ತು ಬೇಟೆ ಪರಸ್ಪರ ಸಮತೋಲನದಲ್ಲಿ ಜಗತ್ತಿನ ಜೊತೆಗೆ ಓಡುವಂತೆ ಮಾಡುವ, ಪರಿಸರದ ಸಂಕೀರ್ಣ ಗತಿಯ ಉಯ್ಯಾಲೆ. ಜೀವನಕ್ಕೆ ಒಂದು ವಿನ್ಯಾಸವಿದೆ – ಅದು ಕೆಲವೊಮ್ಮೆ ಭೂಮಿಯ ಪರಿಭ್ರಮಣೆಯಷ್ಟು ಭವ್ಯವಾಗಿದ್ದರೆ, ಇನ್ನೂ ಕೆಲವೊಮ್ಮೆ ನಮ್ಮ ಎದೆ ಬಡಿತಗಳಷ್ಟು ಹತ್ತಿರವಾಗಿರುತ್ತದೆ.
ನೈಸರ್ಗಿಕ ತಾಳದ ವಿಜ್ಞಾನ
ನೈಸರ್ಗಿಕ ಲಯ ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಅವಿತುಕೊಂಡಿದೆ. ಸರ್ಕೇಡಿಯನ್ ರಿದಮ್, ಸುಮಾರು 24-ಗಂಟೆಗಳ ಚಕ್ರ, ನಮ್ಮ ಮೆದುಳಿನ ಸೂರ್ಯಾಚಲ ಕೇಂದ್ರದಿಂದ ನಿಯಂತ್ರಿತವಾಗುತ್ತದೆ—ಇದು ನಮ್ಮ ಆಂತರಿಕ ಗಡಿಯಾರ. ಈ ಒಳ ಗಡಿಯಾರವು ಪ್ರಕೃತಿಯ ಬೆಳಕು-ಕತ್ತಲಿನ ಚಕ್ರಕ್ಕೆ ಹೊಂದಿಕೊಳ್ಳುತ್ತದೆ, ಇದು ನಮ್ಮ ನಿದ್ರೆ, ಜೀರ್ಣಶಕ್ತಿ ಮತ್ತು ಮನೋಭಾವದ ಮೇಲೆ ಪ್ರಭಾವ ಬೀರುತ್ತದೆ. ನಾವು ಈ ಲಯದ ವಿರುದ್ಧವಾಗಿ ಜೀವಿಸಿದಾಗ, ಅನೇಕ ತೊಂದರೆಗಳನ್ನು ಅನುಭವಿಸುತ್ತೇವೆ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು, ಕಾರ್ಯ ನಿಮಿತ್ತ ಇಡೀ ರಾತ್ರಿ ಎಚ್ಚರದಿಂದಿರುವುದು, ಅತಿಯಾಗಿ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಒತ್ತಡ, ಒಂಟಿತನ ಉಂಟಾಗುತ್ತದೆ ಮತ್ತು ನಮ್ಮ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಮನುಷ್ಯರನ್ನೂ ಮೀರಿ, ಪ್ರಕೃತಿಯು ತನ್ನದೇ ಆದ ಲಯದಲ್ಲಿ ಚಲಿಸುತ್ತದೆ. ಸಸ್ಯಗಳು ಸೂರ್ಯನತ್ತ ತಿರುಗುತ್ತವೆ. ಇದನ್ನು ಹೆಲಿಯೋಟ್ರೋಪಿ ಎನ್ನುತ್ತಾರೆ. ಋತುಗಳು ಪ್ರಾಣಿಗಳ ವರ್ತನೆಯಲ್ಲಿ ಬದಲಾವಣೆಯನ್ನು ತರುತ್ತವೆ, ಸುಪ್ತ ಸ್ಥಿತಿಯಿಂದ ಸಂತಾನಾಭಿವೃದ್ಧಿ ಮುಂದಾಗುತ್ತವೆ. ಅತೀ ಸೂಕ್ಷ್ಮ ಜೀವಿಗಳಾದ ಬ್ಯಾಕ್ಟೀರಿಯಾ ಸಹ ಪರಿಸರ ಸೂಚನೆಗಳಿಗೆ ಪ್ರತಿಕ್ರಿಯಿಸುತ್ತದೆ, ಪರಿಪೂರ್ಣ ಸಮನ್ವಯದಲ್ಲಿ ತಮ್ಮ ಕ್ರಿಯೆಗಳನ್ನು ಜೋಡಿಸುತ್ತವೆ.
ಭಾವನೆ ಮತ್ತು ಪ್ರಕೃತಿಯ ಸಂಪರ್ಕ
ಆದರೆ ನಾವು ಕೇವಲ ಈ ಲಯದ ವೀಕ್ಷಕರಲ್ಲ- ನಾವೂ ಕೂಡಾ ಇದರ ಒಂದು ಭಾಗ. ಮತ್ತು ನಾವು ಪ್ರಕೃತಿಯ ನಾದದಿಂದ ದೂರವಾದಾಗ, ನಮ್ಮೊಳಗೆ ಏನೋ ಖಾಲಿತನ ಕಾಡುತ್ತದೆ. ವೇಗದ ಬದುಕು ನಮ್ಮನ್ನು ಈ ಸುಂದರ ಸಂಪರ್ಕದಿಂದ ದೂರಕ್ಕೆ ಕೊಂಡೊಯ್ಯುತ್ತಿದೆ. ಗಾಳಿಯ ಇಂಪಾದ ಶಬ್ದವನ್ನು, ಸಮುದ್ರದ ಅಲೆಗಳ ಧ್ವನಿಯನ್ನು, ಸಜೀವ ಪ್ರಪಂಚದ ಮಿಂಚನ್ನು ನಮ್ಮಿಂದ ಮುಚ್ಚಿಡುತ್ತಿದೆ. ನಾವು ಸಹ ಭೂಮಿ ತಾಯಿಯ ಮಕ್ಕಳೇ, ಚಂದ್ರ ಮತ್ತು ನಕ್ಷತ್ರಗಳನ್ನು ನಿಯಂತ್ರಿಸುತ್ತಿರುವ ಶಕ್ತಿಯೇ ನಮ್ಮನ್ನೂ ಆಳುತ್ತಿದೆ ಎಂಬುದನ್ನು ನಾವು ಮರೆತುಬಿಡುತ್ತೇವೆ.
ನೀವು ಯಾವತ್ತಾದರೂ ಮುಂಜಾವಿನಲ್ಲಿ ಹೊರಗೆ ಬಂದು ಜಗತ್ತು ಪೂರ್ಣ ಜಾಗೃತವಾಗುವ ಮೊದಲಿನ ಶಾಂತತೆಯನ್ನು ಅನುಭವಿಸಿದ್ದೀರಾ? ಸೂರ್ಯೋದಯವನ್ನು ನೋಡಿದ್ದೀರಾ? ಸೂರ್ಯನ ಸೌಮ್ಯ ಕಿರಣಗಳು ನಿಮ್ಮ ಮೈ ಸೋಕಿದಾಗ ಮನಸ್ಸು ಪ್ರಫುಲ್ಲವಾಗುವುದನ್ನು ಗಮನಿಸಿದ್ದೀರಾ? ಬೆಳಗಿನ ಪ್ರಕೃತಿ ಅತ್ಯಂತ ಪವಿತ್ರವೆಂದೆನಿಸುವುದಕ್ಕೆ ಕಾರಣವಿದೆ – ಇದು ನಮ್ಮನ್ನು ನಮ್ಮ ಲಯದೊಂದಿಗೆ ಸರಿಹೊಂದಿಸುತ್ತದೆ. ಕವಿಗಳು, ತತ್ವಜ್ಞಾನಿಗಳಿಗೆ ಮೊದಲೇ ತಿಳಿದಿದ್ದ ಈ ವಿಚಾರವನ್ನೇ ವಿಜ್ಞಾನಿಗಳೂ ಹೇಳುತ್ತಿದ್ದಾರೆ. ನಿಸರ್ಗದ ಮಡಿಲಿನಲ್ಲಿ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ, ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ, ಮತ್ತು ಮನಸ್ಸು ತಿಳಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ವಿಜ್ಞಾನವೇ ಅಧ್ಯಯನ ಮಾಡುತ್ತಿರುವ ಅದೆಷ್ಟೋ ಸಮಸ್ಯೆಗಳಿಗೆ ಪ್ರಕೃತಿ ಸದ್ದಿಲ್ಲದೇ ಚಿಕಿತ್ಸೆ ನೀಡುತ್ತಿದೆ.
ನೈಸರ್ಗಿಕ ಲಯದೊಂದಿಗೆ ಜೀವನ
ನೈಸರ್ಗಿಕ ಲಯದೊಂದಿಗೆ ಜೀವಿಸುವುದೇ ಒಂದು ಉತ್ತಮ ಜೀವನ. ಸೂರ್ಯೊದಯದ ವೇಳೆಗೆ ಏಳುವುದು, ಕತ್ತಲಾಗುತ್ತಿದ್ದಂತೆ ವಿಶ್ರಾಂತಿ ಪಡೆಯುವುದು ಜೀವನದ ಸರಿಯಾದ ವಿಧಾನ. ಋತುಗಳಿಗೆ ಅನುಸಾರವಾಗಿ ಬದುಕುವುದು, ಆಯಾ ಋತುವಿನಲ್ಲಿ ಸ್ಥಳೀಯವಾಗಿ ದೊರೆತ ಆಹಾರವನ್ನು ಸೇವಿಸುವುದು ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿ. ಜೀವನದ ವೇಗವನ್ನು ಕಡಿಮೆ ಮಾಡಬೇಕು, ಆಳವಾಗಿ ಉಸಿರಾಡಬೇಕು, ಬೀಸುವ ಗಾಳಿ, ಹರಿಯುವ ನೀರಿನ ಜುಳುಜುಳು ಸದ್ದನ್ನು ಕೇಳಬೇಕು. ಜೊತೆಗೆ ಜೀವನವೆಂದರೆ ಒಂದು ಚಕ್ರ – ಇಲ್ಲಿ, ಸೋಲು – ಗೆಲುವು, ಸಾವು – ನೋವು, ಆನಂದ – ದುಃಖ ಎಲ್ಲಾ ಇದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಅರಿತುಕೊಂಡು ನೆಮ್ಮದಿಯಿಂದಿರಬೇಕು.
ನಾವು ಪ್ರಕೃತಿಯಿಂದ ಭಿನ್ನವಾಗಿಲ್ಲ; ನಾವು ಅದರ ಸಂಗೀತ, ಅದರ ಚಲನೆ, ಅದರ ಸ್ಪಂದನ. ಮತ್ತು ನಾವು ಇದನ್ನು ಮನಸ್ಸಿನಲ್ಲಿಟ್ಟುಕೊಂಡಾಗ, ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಷ್ಟೇ ಆಲ್ಲದೇ, ನಮ್ಮೊಳಗೂ ಶಾಂತಿ ಇರುತ್ತದೆ.