ಮಹಿಳೆಯ ಕರಿಮಣಿಸರ ಎಗರಿಸಿದ ಪ್ರಕರಣ- ಇಬ್ಬರ ಬಂಧನ

ಮಹಿಳೆಯ ಕರಿಮಣಿಸರ ಎಗರಿಸಿದ ಪ್ರಕರಣ- ಇಬ್ಬರ ಬಂಧನ

ವಿಟ್ಲ: ಔಷದಿ ಖರೀದಿಯ ನೆಪದಲ್ಲಿ ಆಯುರ್ವೇದ ಮೆಡಿಕಲ್ ಶಾಪ್ ಒಂದಕ್ಕೆ ತೆರಳಿ ಅಲ್ಲಿದ್ದ ಮಹಿಳೆಯ ಕರಿಮಣಿ ಸರವನ್ನು‌ ಎಳೆದು ದ್ವಿಚಕ್ರ ವಾಹನದಲ್ಲಿಪರಾರಿಯಾಗಿದ್ದ ಪುತ್ತೂರು ಮೂಲದ ಇಬ್ಬರು ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪುತ್ತೂರಿನ ಕುಂಜೂರು ಪಂಜ ನಿವಾಸಿ ಶಂಸುದ್ದೀನ್ (28) ಹಾಗೂ ಬನ್ನೂರು ನಿವಾಸಿ ನೌಷಾದ್ ಬಿ.ಎ.(37) ಎಂದು ಗುರುತಿಸಲಾಗಿದೆ.

ಜ.11 ರಂದು ಸಾಯಂಕಾಲ 3.30ರ ಸುಮಾರಿಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ನೀರ್ಚಾಲು ಮೇಲಿನ ಪೇಟೆಯಲ್ಲಿ ಈ ಘಟನೆ ನಡೆದಿದೆ. ನಿರ್ಚಾಲು ಮೇಲಿನ ಪೇಟೆಯಲ್ಲಿರುವ ಜೇನುಮೂಲೆ ದಿ. ಡಾ.ಶಂಕರನಾರಾಯಣ ಭಟ್ ರವರ ಪತ್ನಿ ಸರೋಜಿನಿ ಎಸ್.ಎನ್.ರವರ ಮಾಲಕತ್ವದ ರಾಘವೇಂದ್ರ ಆಯುರ್ವೇದ ಮೆಡಿಕಲ್‌ಗೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರ ಪೈಕಿ ಒಬ್ಬಾತ ಮೆಡಿಕಲ್‌ಗೆ ಬಂದು ಎದೆ ನೋವಿಗೆ ಔಷದ ಬೇಕೆಂದು ಕೇಳಿದನೆನ್ನಲಾಗಿದೆ. ಔಷದಿ‌ ನೀಡುವ‌ ಮದ್ಯೆ ಯುವಕ ಸರೋಜಿನಿ ಅವರ ಕತ್ತಿನಲ್ಲಿದ್ದ ಮೂರುವರೆ ಪವನು ತೂಕದ ಚಿನ್ನದ ಕರಿಮಣಿ ಎಗರಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದರು.

ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ವಿವಿಧ ಕಡೆಗಳ ಸಿಸಿ ಟಿ.ವಿ. ಫುಟೇಜ್‌ಗಳ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳ ಜಾಡುಹಿಡಿಯುವಲ್ಲಿ ಸಫಲರಾಗಿದ್ದರು‌. ಇದೀಗ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಪೊಲೀಸರು ಕಳವುಗೈದ‌ ಚಿನ್ನಾಭರಣವನ್ನು ಮಂಗಳೂರಿನ ಚಿನ್ನದ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದು,‌ ಅಲ್ಲಿಂದ ಪೊಲೀಸರು ವಶಪಡಿಸಿದ್ದಾರೆ ಎನ್ನಲಾಗಿದೆ.

ಕಾಸರಗೋಡು ಡಿವೈಎಸ್ಪಿ ಸುನಿಲ್‌ಕುಮಾರ್ ಅವರ ಆದೇಶದಂತೆ ಬದಿಯಡ್ಕ ಸಿ.ಐ.ಸುಬೀರ್, ಎಸ್.ಐ.ನಿಖಿಲ್, ಸಿಬ್ಬಂದಿಗಳಾದ ಮುಹಮ್ಮದ್, ಪ್ರಸಾದ್, ಶ್ರೀನೇಶ್‌ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ರಾಜ್ಯ