ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವು

ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವು

ನವದೆಹಲಿ: ನಿನ್ನೆ ರಾತ್ರಿ 8:00 ಗಂಟೆಗೆ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ ಮಕ್ಕಳೂ ಸೇರಿ ಕನಿಷ್ಠ 15 ಮಂದಿ, ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಪ್ರಯಾಣಿಸಲು ಅಪಾರ ಜನ ಸೇರುವ ವೇಳೆಯಲ್ಲಿ, ರೈಲ್ವೇ ನಿಲ್ದಾಣದ 14 ಮತ್ತು 15ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಗರಾಜ್‌ಗೆ ಹೋಗುವ ಎರಡು ರೈಲುಗಳ ರದ್ದಾದ ಹಿನ್ನೆಲೆ ಜನರಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿ, ಈ ಭೀಕರ ಕಾಲ್ತುಳಿತ ಉಂಟಾಗಿದೆ. ಪ್ರಯಾಗ್‌ರಾಜ್‌ಗೆ ಹೋಗಬೇಕಿದ್ದ ಎರಡು ರೈಲುಗಳ ರದ್ದತಿಯ ಅಚಾನಕ್ ಘೋಷಣೆಯಿಂದ ಮಹಾ ಕುಂಭ ಮೇಳಕ್ಕೆ ಹೋಗಲು ಉತ್ಸುಕರಾಗಿದ್ದ ಅಪಾರ ಸಂಖ್ಯೆಯ ಪ್ರಯಾಣಿಕರಲ್ಲಿ ಗೊಂದಲ ಮತ್ತು ಭಯ ಉಂಟಾಗಿದ್ದು, ಇದರಿಂದ ಜನರ ಮಧ್ಯದಲ್ಲಿ ಕಾಲ್ತುಳಿತ ಉಂಟಾಗಿದೆ. ರೈಲುಗಳ ರದ್ಧತಿಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ಈ ದುರಂತಕ್ಕೆ ದುಃಖ ವ್ಯಕ್ತಪಡಿಸಿದ್ದು, ಪೀಡಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತನಿಖೆ ನಡೆಸಿ ಘಟನೆಗೆ ಕಾರಣವೇನೆಂದು ಪತ್ತೆಹಚ್ಚುತ್ತೇವೆ ಎಂದು ಘೋಷಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಘಟನೆಗೂ ಮೊದಲು, ಕಳೆದ ತಿಂಗಳ ಮಹಾ ಕುಂಭ ಮೇಳದಲ್ಲಿ ಈ ರೀತಿಯ ಮತ್ತೊಂದು ದುರಂತ ಸಂಭವಿಸಿತ್ತು, ಅದರಲ್ಲಿ ಸುಮಾರು 30 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಅಪರಾಧ