
ನವದೆಹಲಿ: ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಮಟ್ಟ ಹಾಕಲಾಗಿದೆ. ಈ ಮಹತ್ವದ ಗೆಲುವನ್ನು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಶ್ಲಾಘನೆ ಮಾಡಿದ್ದಾರೆ. ಇದು ಭಾರತವನ್ನು ನಕ್ಸಲ್ ಮುಕ್ತ ಮಾಡುವ ಪ್ರಮುಖ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದ್ದಾರೆ.


“X” ಪ್ಲಾಟ್‌ಫಾರ್ಮ್‌ನಲ್ಲಿ ಅಮಿತ್ ಶಾ ನಕ್ಸಲ್ ಭೀತಿಯನ್ನು ಮುಕ್ತಗೊಳಿಸುವ ಭದ್ರತಾ ಪಡೆಯ ಈ ಸಾಹಸ ಕಾರ್ಯ ಅತ್ಯಂತ ಗಣನೀಯವಾದದ್ದು. ಈ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹೊಡೆದುರುಳಿಸುವುದರ ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ, ಈ ಕಾರ್ಯಾಚರಣೆಯಲ್ಲಿ ದೇಶದ ಇಬ್ಬರು ವೀರ ಯೋಧರು ಹುತಾತ್ಮರಾಗಿದ್ದಾರೆ. ಜಿಲ್ಲಾ ರಿಸರ್ವ್ ಗಾರ್ಡ್ (DRG) ನ ಮುಖ್ಯ ಹವಾಲ್ದಾರರಾದ ಶ್ರೀ ನರೇಶ್ ಧ್ರುವ್ ಮತ್ತು ಪ್ರತ್ಯೇಕ ಕಾರ್ಯಪಡೆ (STF) ನ ವಾಸಿತ್ ರಾವತೆ ಎಂದು ಗುರುತಿಸಲಾಗಿದೆ. ಅಮಿತ್ ಶಾ ಅವರು ಶೋಕವನ್ನು ವ್ಯಕ್ತಪಡಿಸಿ, “ದೇಶವು ಈ ವೀರ ಯೋಧರಿಗೆ ಸದಾಕಾಲ ಕೃತಜ್ಞವಾಗಿರುತ್ತದೆ” ಎಂದು ಹೇಳಿದ್ದಾರೆ.
ಜೊತೆಗೆ, ಈ ಕಾರ್ಯಾಚರಣೆಯಲ್ಲಿ DRG ಯ ಜಗ್ಗು ಕಲಾಂ ಮತ್ತು STF ನ ಗುಲಾಬ್ ಮಾಂಡವಿ ಎಂಬ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ವಿಮಾನದ ಮೂಲಕ ಆಸ್ಪತ್ರೆಗೆ ಒಯ್ಯಲಾಗಿದೆ.
ಗುರಿ: 2026ರ ಮಾರ್ಚ್ 31ರೊಳಗೆ ನಕ್ಸಲಿಸಂ ನಿರ್ಮೂಲನೆ
“ಭಾರತದಲ್ಲಿ ನಕ್ಸಲ್ ದಾಳಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ. 2026ರ ಮಾರ್ಚ್ 31ರೊಳಗೆ ಭಾರತ ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಿರುತ್ತದೆ” ಎಂದು ಅಮಿತ್ ಶಾ ಪುನರುಚಿಸಿದ್ದಾರೆ. “ನಾವು ನಕ್ಸಲ್ ಹಿಂಸೆಯಿಂದ ಯಾವ ನಾಗರೀಕನಿಗೂ ಪ್ರಾಣ ಹಾನಿಯಾಗದಂತೆ ಕಾಳಜಿ ವಹಿಸುವ ದೃಢ ಸಂಕಲ್ಪ ಮಾಡಿದ್ದೇವೆ” ಎಂದು ಅವರು ತಿಳಿಸಿದರು.
ಈ ಸಾಧನೆ ಭಾರತದ ನಕ್ಸಲ್ ವಿರೋಧಿ ಹೋರಾಟದಲ್ಲಿ ಪ್ರಮುಖ ಮೈಲುಗಲ್ಲು. ಸರ್ಕಾರದ ನಿರಂತರ ಪ್ರಯತ್ನಗಳು ಮತ್ತು ಭದ್ರತಾ ಪಡೆಗಳ ದೃಢ ಸಂಕಲ್ಪದಿಂದ, ನಕ್ಸಲ್ ಮುಕ್ತ ಭಾರತದ ಕನಸು ನನಸಾಗುವ ದಿನಗಳು ಮತ್ತಷ್ಟು ಹತ್ತಿರವಾಗಿವೆ.