
ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಪೊಟ್ಯಾಸಿಯಂ-ಸಹಿತ ಉಪ್ಪಿನ ಪರ್ಯಾಯಗಳ ಬಳಕೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದು ನಾವು ಈಗ ಸೇವಿಸುತ್ತಿರುವ ಅಡುಗೆ ಉಪ್ಪಿನ (ಸೋಡಿಯಂ ಕ್ಲೋರೈಡ್ ಸಹಿತ ಉಪ್ಪು) ಬದಲಾಗಿ ಪೊಟ್ಯಾಸಿಯಂ – ಕ್ಲೋರೈಡ್ ಇರುವ ಉಪ್ಪನ್ನು ಬಳಸಬೇಕು ಎಂದು ಸೂಚಿಸುತ್ತದೆ. ಇದರಿಂದ ಸೋಡಿಯಂ ಸೇವನೆ ಕಡಿಮೆಯಾಗುತ್ತದೆ ಮತ್ತು ಪೊಟ್ಯಾಸಿಯಂ ಸೇವನೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಸೋಡಿಯಂ ಕ್ಲೋರೈಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯ – ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ಮುಂತಾದ ರೋಗಗಳು ಉಂಟಾಗುತ್ತವೆ. ಒಬ್ಬ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 2 ಗ್ರಾಂ ಗಿಂತ ಕಡಿಮೆ (ಸರಿಸುಮಾರು 5 ಗ್ರಾಂ ಉಪ್ಪು) ಪ್ರಮಾಣದ ಸೋಡಿಯಂ ಕ್ಲೋರೈಡ್ ಅನ್ನು ಸೇವಿಸಬೇಕು ಮತ್ತು ಪ್ರತಿದಿನ ಕನಿಷ್ಠ 3.51 ಗ್ರಾಂ ಪೊಟ್ಯಾಸಿಯಮ್ ಸೇವಿಸಬೇಕು ಎಂದು WHO ಸಲಹೆ ನೀಡುತ್ತದೆ. ಹಾಗಿದ್ದರೂ, ಜನರು ಇದರ ಎರಡು ಪಟ್ಟು ಸೋಡಿಯಂ ಅನ್ನು ಸೇವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಡುಗೆ ಉಪ್ಪಿಗೆ ಪರ್ಯಾಯವನ್ನು ಕಂಡುಕೊಳ್ಳುವುದರ ಜೊತೆಗೆ, ಹಣ್ಣು – ತರಕಾರಿಗಳು ಮತ್ತು ಇತರ ಪೊಟ್ಯಾಸಿಯಮ್-ಭರಿತ ಆಹಾರವನ್ನು ಸೇವಿಸಿ, ನೈಸರ್ಗಿಕವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟವನ್ನು ಸಮತೋಲನಗೊಳಿಸಬೇಕು ಎಂದು WHO ಒತ್ತಿಹೇಳುತ್ತದೆ. ಸೋಡಿಯಂ ಯಥೇಚ್ಚವಾಗಿರುವ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ, ಉತ್ತಮ ಆರೋಗ್ಯವನ್ನು ಸಾಧಿಸಬಹುದು ಎಂದು ಸಹ ಶಿಫಾರಸು ಮಾಡಲಾಗಿದೆ.
ಮೂತ್ರಪಿಂಡದ ಕಾಯಿಲೆ ಅಥವಾ ಪೊಟ್ಯಾಸಿಯಂ ಮೆಟಾಬೊಲಿಸಂ ಸಮಸ್ಯೆಯಿಂದ ಬಳಲುತ್ತಿರುವವರು ಪೊಟ್ಯಾಸಿಯಂ – ಕ್ಲೋರೈಡ್ ಯುಕ್ತ ಉಪ್ಪನ್ನು ಬಳಸುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.