
ಮುಂಬೈ: ಡಿಸೆಂಬರ್ 18, 2024ರಂದು ಮುಂಬೈ ಕರಾವಳಿಯ ಸಮೀಪ ಎರಡು ನೌಕೆಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಭಾರತದ ನೌಕಾಪಡೆಗೆ ಸೇರಿದ ವೇಗದ ಬೋಟ್ ಮತ್ತು “ನೀಲಕಮಲ್” ಹೆಸರಿನ ಪ್ರಯಾಣಿಕರ ಬೋಟ್ ಮುಖಾಮುಖಿ ಡಿಕ್ಕಿಯಾಗಿ, ಪ್ರಯಾಣಿಕರ ಬೋಟ್ ಉರುಳಿದೆ. ನೀಲಕಮಲ್ ಬೋಟ್ ಅನೇಕ ಪ್ರವಾಸಿಗರನ್ನು ಜಗತ್ಪ್ರಸಿದ್ಧ ತಾಣವಾದ ಎಲಿಫೆಂಟಾ ದ್ವೀಪಕ್ಕೆ ಕರೆದೊಯ್ಯುತ್ತಿತ್ತು.

ಈ ದುರ್ಘಟನೆಯಲ್ಲಿ 3 ಜನ ನೌಕಾಪಡೆ ಸಿಬ್ಬಂದಿಗಳು ಸೇರಿದಂತೆ ಕನಿಷ್ಠ 13 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 114 ಪ್ರಯಾಣಿಕರನ್ನು ರಕ್ಷಿಸಲಾಗಿದೆ. 97 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರೆ, 4 ಮಂದಿಗೆ ಗಂಭೀರ ಗಾಯಗಳಾಗಿವೆ. ಭಾರತೀಯ ನೌಕಾಪಡೆ, ಕರಾವಳಿ ರಕ್ಷಣಾ ಸಿಬ್ಬಂದಿಗಳು, ರಕ್ಷಣಾ ಹೆಲಿಕಾಪ್ಟರ್‌ಗಳು ಮತ್ತು ಮುಳುಗುತಜ್ಞರು ನಿರಂತರ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಪ್ರಯಾಣಿಕರಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿರುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ನೌಕಾಪಡೆಗೆ ಸೇರಿದ ಬೋಟ್ ಎಂಜಿನ್ ಪರೀಕ್ಷೆಯ ವೇಳೆ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ಬೋಟ್ ಗೆ ಡಿಕ್ಕಿಯಾಗಿದೆ. ಈ ಕುರಿತು ತನಿಖೆ ಮುಂದುವರೆದಿದ್ದು, ಈ ದೋಷಕ್ಕೆ ಕಾರಣವೇನೆಂದು ತಿಳಿಯಬೇಕಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಾಪವನ್ನು ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2,00,000 ಮತ್ತು ಗಾಯಾಳುಗಳಿಗೆ ತಲಾ ₹50,000 ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಈ ದುರ್ಘಟನೆಯ ನಂತರ, ಮುಂಬೈಯ ಗೇಟ್ವೇ ಆಫ್ ಇಂಡಿಯಾ ಇಂದ ಹೊರಡುವ ಎಲ್ಲ ಬೋಟ್‌ಗಳಲ್ಲಿ ಪ್ರಯಾಣಿಕರಿಗೆ ಜೀವ ರಕ್ಷಕ ಜಾಕೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ದುರಂತವು, ಸುರಕ್ಷತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಹಾಗೂ ನೌಕೆಗಳ ನಿಯಮಿತ ನಿರ್ವಹಣೆಯನ್ನು ಒತ್ತಿ ಹೇಳುತ್ತದೆ.
