ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತ: ಕಾರ್ಡ್ ಅಮಾನತು ತೆರವು; ಮುನಿಯಪ್ಪ

ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತ: ಕಾರ್ಡ್ ಅಮಾನತು ತೆರವು; ಮುನಿಯಪ್ಪ

ಬೆಂಗಳೂರು: ಬಿಪಿಎಲ್​​ ಪಡಿತರ ಚೀಟಿಗಳ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇಡೀ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಮಾಹಿತಿ ನೀಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ‘ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಪಡಿತರ ಚೀಟಿಗಳು ಎರಡು ತಿಂಗಳ ಮೊದಲಿದ್ದಂತೆಯೇ ಮುಂದುವರಿಯಲಿವೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಗೆ ಒಳಪಡಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಹೇಳಿದರು.

‘ಈಗಾಗಲೇ ಪರಿಷ್ಕರಣೆಗೊಂಡು, ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ಪಡಿತರ ಚೀಟಿಗಳನ್ನು ಒಂದು ವಾರದ ಒಳಗೆ ಮತ್ತೆ ಲಾಗಿನ್‌ಗೆ ಒಳಪಡಿಸಿ, ಮುಂದಿನ ವಾರದಿಂದ ಪಡಿತರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ, ಬಡವರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.

ಪಾನ್​ನಿಂದ ಬಯಲು: ‘ಪಾನ್‌ ಕಾರ್ಡ್‌ ಆಧಾರಿತ ಪರಿಶೀಲನೆ ವೇಳೆ ಕೆಲವರು ಆದಾಯ ತೆರಿಗೆ ಪಾವತಿ ಕುರಿತ ದಾಖಲೆ ಸಲ್ಲಿಸಲು ವಿಳಂಬ ಮಾಡಿ ದಂಡ ವಿಧಿಸಿಕೊಂಡಿದ್ದಾರೆ. ಅಂಥವರು ಆದಾಯ ತೆರಿಗೆ ಪಾವತಿದಾರರು ಎಂಬುದು ಖಚಿತವಾಗಿದೆ. ಇನ್ನೂ ಕೆಲವರು ಸರ್ಕಾರಿ ನೌಕರರಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರವೇ ಬಿಪಿಎಲ್‌ ಪಡಿತರ ಚೀಟಿಗಳ ಪರಿಶೀಲನೆ ನಡೆದಿದೆ’ ಎಂದರು.

‘ಈವರೆಗೆ ಕಾರ್ಡ್‌ಗಳ ಅಮಾನತು, ರದ್ದು ಹಾಗೂ ಎಪಿಎಲ್‌ ಪಡಿತರ ಚೀಟಿಗಳ ಪರಿವರ್ತನೆ ಸೇರಿ 3,81,983 ಪಡಿತರ ಚೀಟಿಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗಿದೆ. ಅದರಲ್ಲಿ 64,589 ಪಡಿತರ ಚೀಟಿದಾರರು ಆದಾಯ ತೆರಿಗೆ ಪಾವತಿದಾರರು, 3,355 ಸರ್ಕಾರಿ ನೌಕರರರು. 39,159 ಪಡಿತರ ಚೀಟಿದಾರರ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕೂ ಹೆಚ್ಚು ಇರುವಂತಹವರದ್ದಾಗಿವೆ’ ಎಂದು ಅವರು ವಿವರಿಸಿದರು. 

ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ; ‘ಮಹಾರಾಷ್ಟ್ರ ಹೊರತುಪಡಿಸಿದರೆ ಅತೀ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯ ಕರ್ನಾಟಕ. ಆದರೂ, ಇಲ್ಲಿ ಬಿಪಿಎಲ್‌ ಪಡಿತರ ಚೀಟಿಗಳ ಪ್ರಮಾಣ ಶೇ 69.6ರಷ್ಟಿದೆ. ರಾಜ್ಯದ ತಲಾ ಆದಾಯ ಹೆಚ್ಚಿದ್ದರೂ ಬಿಪಿಎಲ್‌ ಕುಟುಂಬಗಳ ಸಂಖ್ಯೆ ಜಾಸ್ತಿ ಇದ್ದ ಕಾರಣ ಕೇಂದ್ರ ಸರ್ಕಾರದ ನಿರ್ದೇಶನದಂತೆ ಎರಡು ತಿಂಗಳ ಹಿಂದೆಯೇ ಪಡಿತರ ಚೀಟಿಗಳ ಪರಿಷ್ಕರಣೆಗೆ ನಿರ್ಧರಿಸಲಾಗಿತ್ತು’ ಎಂದರು.

ಮತ್ತಷ್ಟು ಅರ್ಜಿ: ‘ಪಡಿತರ ಚೀಟಿಗಾಗಿ ಎರಡು ವರ್ಷಗಳಿಂದ ಸಲ್ಲಿಕೆಯಾಗಿದ್ದ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದವು. ಅವುಗಳನ್ನು ಪರಿಷ್ಕರಿಸಿ 2,69,536 ಕುಟುಂಬಗಳಿಗೆ ‍ಪಡಿತರ ಚೀಟಿ ನೀಡಲಾಗಿದೆ. ಅವರೆಲ್ಲರಿಗೂ ಅಕ್ಕಿ ವಿತರಿಸಲಾಗುತ್ತಿದೆ. ಸದ್ಯಕ್ಕೆ ಸ್ಥಗಿತಗೊಳಿಸಿರುವ ಪರಿಷ್ಕರಣೆ ಕಾರ್ಯವನ್ನು ಮತ್ತೆ ಆರಂಭಿಸಿ, ಎಲ್ಲವನ್ನೂ ಸರಿಪಡಿಸಿದ ಬಳಿಕ ಹೊಸ ಪಡಿತರ ಚೀಟಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುನಿಯಪ್ಪ ತಿಳಿಸಿದರು.‌

‘ಯಾರ ಅನ್ನವನ್ನೂ ಕಸಿದುಕೊಳ್ಳುತ್ತಿಲ್ಲ’: ‘ಪಡಿತರ ಚೀಟಿ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿಯವರು ರಾಜೀನಾಮೆ ಕೇಳುವುದು ಅವರ ಕರ್ತವ್ಯ. ಆದರೆ, ಅದರ ಅಗತ್ಯವಿಲ್ಲ. ನಾವು ಯಾರ ಅನ್ನವನ್ನೂ ಕಸಿದುಕೊಳ್ಳುತ್ತಿಲ್ಲ. ರಾಜಕೀಯ ಮಾಡುವುದನ್ನು ಬಿಟ್ಟು ಬಿಜೆಪಿಗೆ ಬೇರೇನೂ ಕೆಲಸವಿಲ್ಲ‌. ಹಲವು ಕ್ಷೇತ್ರಗಳಲ್ಲಿ ಶೇ 90ರಷ್ಟು ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ದೇವನಹಳ್ಳಿ ಕ್ಷೇತ್ರದಲ್ಲಿ ಶೇ 90, ಹೊಳೆನರಸೀಪುರದಲ್ಲಿ ಶೇ 92ರಷ್ಟು ಬಿಪಿಎಲ್ ಕಾರ್ಡ್ ಕುಟುಂಬಗಳಿವೆ. ಮಾನದಂಡಗಳ ಆಧಾರದಲ್ಲಿ ಪಡಿತರ ಚೀಟಿಗಳನ್ನು ಪರಿಶೀಲಿಸಬೇಕಿದೆ’ ಎಂದರು

ರಾಜ್ಯ