ಬಾಲಕಿಯ ಅತ್ಯಾಚಾರ -ಕೊಲೆ ಪ್ರಕರಣ – ಆರೋಪಿಗಳಿಗೆ ಗಲ್ಲು ಶಿಕ್ಷೆ :ಮಂಗಳೂರಿನ ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕಟವಾದ ಪ್ರಥಮ ಮರಣ ದಂಡನೆ

ಬಾಲಕಿಯ ಅತ್ಯಾಚಾರ -ಕೊಲೆ ಪ್ರಕರಣ – ಆರೋಪಿಗಳಿಗೆ ಗಲ್ಲು ಶಿಕ್ಷೆ :ಮಂಗಳೂರಿನ ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕಟವಾದ ಪ್ರಥಮ ಮರಣ ದಂಡನೆ

ಮಂಗಳೂರು: ಮಂಗಳೂರಿನಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿತರಾಗಿದ್ದ ಮಧ್ಯಪ್ರದೇಶ ಮೂಲದ ಜಯಸಿಂಗೋ (21), ಮುಖೇಶ್ ಸಿಂಗ್ (20), ಮನೀಶ್ ತಿರ್ಕಿಗೆ ಮಂಗಳೂರಿನ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಮಂಗಳೂರು ಸಮೀಪದ ತಿರುವೈಲು ಎಂಬ ಗ್ರಾಮದಲ್ಲಿರುವ ರಾಜ್ ಟೈಲ್ಸ್ ಕಾರ್ಖಾನೆಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಅದೇ ಕಾರ್ಖಾನೆಯಲ್ಲಿ ಜಾರ್ಖಂಡ್ ಮೂಲದ ತಿರ್ಕಿ ಲೋಹರ ಹಾಗೂ ಸೀತಾ ಎಂಬ ದಂಪತಿಯ ಮಗಳಾದ 8 ವರ್ಷದ ಬಾಲಕಿಯ ಮೇಲೆ 2021ರ ನ. 21ರಂದು ಈ ಮೂವರು ಅತ್ಯಾಚಾರ ನಡೆಸಿದ್ದರು. ಈ ಮೂವರ ಕುಕೃತ್ಯಕ್ಕೆ ಇವರ ಸಂಗಡಿಗ ಮುನೀಮ್ ಸಿಂಗ್ ಸಹಾಯ ಮಾಡಿದ್ದನು. ಇದೀಗ, ಆತ ತಲೆ ಮರೆಸಿಕೊಂಡಿದ್ದಾನೆ. ಹಾಗಾಗಿ, ಸದ್ಯಕ್ಕೆ ಈ ಮೂವರ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯವು ಆರೋಪಿಗಳಿಗೆ ಮರಣದಂಡನೆ ವಿಧಿಸಿದೆ.

ಘಟನೆ2021ರ ನ. 21ರಂದು ಭಾನುವಾರವಾದ್ದರಿಂದ ಕಾರ್ಖಾನೆಗೆ ರಜೆ ಇತ್ತು. ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಕಾರ್ಖಾನೆಯ ಕಾಂಪೌಂಡ್ ನೊಳಗಡೆಯೇ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಮಗುವು ಕಾರ್ಖಾನೆಯ ಒಳಆವರಣದಲ್ಲಿ ಆಟವಾಡುತ್ತಿತ್ತು. ಅದನ್ನು ಗಮನಿಸಿದ ಆರೋಪಿಗಳು, ಯಾರೂ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಆ ಮಗುವಿಗೆ ಚಿಕ್ಕಿ ಮತ್ತಿತರ ತಿನಿಸುಗಳ ಆಮಿಷ ತೋರಿಸಿ, ಫ್ಯಾಕ್ಟರಿಯ ಆವರಣದಲ್ಲೇ ಇವರು ಹಸಿ ಇಟ್ಟಿಗೆಗಳನ್ನು ತಯಾರಿಸುವ ಹಾಗೂ ಸಿಸಿಟಿವಿಗಳು ಇಲ್ಲದ ಕಡೆಗೆ ಕರೆದೊಯ್ದಿದ್ದರು.ಅಲ್ಲಿ ಜಯಸಿಂಗೋ, ಮುಖೇಶ್ ಸಿಂಗ್, ಮನೀಶ್ ತಿರ್ಕಿ ಅವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಅಮಾನವೀಯ ಘಟನೆ ನಡೆಯುತ್ತಿದ್ದಾಗ ನಾಲ್ಕನೇ ಆರೋಪಿಯಾದ ಮುನೀಮ್ ಸಿಂಗ್ ಆ ಫ್ಯಾಕ್ಟರಿ ಹಾಲ್ ನ ಬಾಗಿಲಿನಲ್ಲಿ ನಿಂತು ಕಾವಲು ಕಾಯುತ್ತಿದ್ದ ಹಾಗೂ ಅತ್ಯಾಚಾರ ಮುಗಿದ ನಂತರ ಶವವನ್ನು ಸಾಗಿಸಲು ಸಹಾಯ ಮಾಡಿದ್ದ. ನಂತರ, ಮಗು ಬಾಯಿಬಿಟ್ಟರೆ ತಮ್ಮ ಗುಟ್ಟು ಬಯಲಾಗುತ್ತದೆಂದು ಆ ಮಗುವಿನ ಕತ್ತು ಹಿಚುಕಿ ಸ್ಥಳದಲ್ಲೇ ಕೊಂದು, ಆನಂತರ ಆ ಶವವನ್ನು ಫ್ಯಾಕ್ಟರಿಯ ಆವರಣದಲ್ಲೇ ಒಂದು ಕಡೆ ಇದ್ದ ತಗ್ಗಿನಲ್ಲಿ ಇಟ್ಟು ಮೇಲೆ ಚಪ್ಪಡಿ ಕಲ್ಲು ಮುಚ್ಚಿಬಂದಿದ್ದರು.

ಘಟನೆ ಬೆಳಕಿಗೆ ಬಂದ ಮೇಲೆ ಮೃತ ಬಾಲಕಿಯ ತಾಯಿ, ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರ ಸಮೇತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ನಂತರ ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು, ವೈಜ್ಞಾನಿಕ ವರದಿಗಳು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತರ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿದ ನ್ಯಾಯಾಧೀಶರಾದ ಕೆ.ಎಸ್. ಮಾನು ಅವರು, ಜಯಸಿಂಗೋ, ಮುಖೇಶ್ ಸಿಂಗ್, ಮನೀಷ್ ಶಿರ್ಕಿಯವರಿಗೆ ನಾನಾ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ತಲಾ 40 ಸಾವಿರ ರೂ. ದಂಡ ಹಾಕಿದರಲ್ಲದೆ, ಮೂವರಿಗೂ ಮರಣ ದಂಡನೆ ವಿಧಿಸಿದರು.

ಆರೋಪಿಗಳಿಂದ ವಸೂಲಿ ಮಾಡಲಾಗುವ ದಂಡವನ್ನು (ಒಟ್ಟು 1,20,000 ರೂ.) ಮೃತ ಬಾಲಕಿಯ ಪೋಷಕರಿಗೆ ನೀಡಬೇಕು ಎಂದು ಹೇಳಿರುವ ನ್ಯಾಯಾಲಯ, ಬಾಲಕಿಯ ಪೋಷಕರಿಗೆ ಹೆಚ್ಚುವರಿಯಾಗಿ 3,80,000 ರೂ.ಗಳನ್ನು ಅತ್ಯಾಚಾರ ಸಂತ್ರಸ್ಥರ ಪರಿಹಾರ ಯೋಜನೆಯಡಿ ನೀಡಬೇಕೆಂದು ಸೂಚಿಸಿದೆ.

ಪ್ರಥಮ ಮರಣ ದಂಡನೆ : ಮಂಗಳೂರಿನ ಪೋಕ್ಸೋ ನ್ಯಾಯಾಲಯದ ಇತಿಹಾಸದಲ್ಲೇ ಮರಣ ದಂಡನೆ ಶಿಕ್ಷೆ ವಿಧಿಸಿರುವಂತಹ ಪ್ರಥಮ ಪ್ರಕರಣ ಇದಾಗಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಪೋಕ್ಸೋ ನ್ಯಾಯಾಲಯದಲ್ಲಿ ಮರಣ ದಂಡನೆ ವಿಧಿಸಿರುವ ಉದಾಹರಣೆ ಇಲ್ಲ ಎಂದು ವಾದ ಮಂಡಿಸಿದ ಸರಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ಅವರು ತಿಳಿಸಿದ್ದಾರೆ.

ರಾಜ್ಯ