
ಮಂಗಳೂರು: ನಕಲಿ ಪಾಸ್ ಪೋರ್ಟ್ ಮೂಲಕ ದೇಶದೊಳಗೆ ಪ್ರವೇಶಿಸಿ ಉಡುಪಿಯಲ್ಲಿ ನೆಲೆಸಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ 9 ಮಂದಿ ಬಾಂಗ್ಲಾ ದೇಶಿಗರನ್ನು ಎಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈ ಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ವ್ಯಕ್ತಿಯನ್ನು ಅನುಮಾನದ ಮೇರೆಗೆ ಪರಿಸೀಲನೆಗೆ ಒಳಪಡಿಸಿದಾಗ ಆತ ಬಾಂಗ್ಲಾದೇಶದವನೆಂದು ಗೊತ್ತಾಗಿದೆ.

ಮಾಣಿಕ್ ಹುಸೈನ್ (26) ವಿಮಾನ ನಿಲ್ದಾಣದಲ್ಲಿ ಎಮಿಗ್ರೇಷನ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಬಾಂಗ್ಲಾದೇಶಿ ಪ್ರಜೆ. ಬಾಂಗ್ಲಾದೇಶದಿಂದ ಉಡುಪಿಗೆ ಬಂದು ನೆಲೆಸಿದ್ದ ಈತ ಇಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆ ಮಾಡಿಸಿದ್ದ. ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಬಂಧಿಸುವ ಕಾರ್ಯಾಚರಣೆ ನಡೆಯುತ್ತಿರುವುದನ್ನು ಮನಗಂಡ ಈತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈ ಗೆ ಪರಾರಿಯಾಗುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದ. ವಿಮಾನ ನಿಲ್ದಾಣದಲ್ಲಿ ದಾಖಲೆ ಪರಿಶೀಲಿಸುವ ಸಂಧರ್ಭ ಅನುಮಾನಗೊಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಳಿಕ ಆತನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳೂರು ಬಜಪೆ ಪೊಲೀಸರಿಗೊಪ್ಪಿಸಿದ್ದಾರೆ. ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಈತನೊಂದಿಗೆ ಮತ್ತಷ್ಟು ಜನ ಬಾಂಗ್ಲಾದೇಶಿಯರು ದೇಶದೊಳಗೆ ನುಸುಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈತ ನೀಡಿದ ಮಾಹಿತಿ ಆಧಾರದಲ್ಲಿ ಮತ್ತೆ 8 ಜನರನ್ನು ಉಡುಪಿಯ ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಸೇರಿದಂತೆ ಒಟ್ಟು 9 ಮಂದಿಯನ್ನು ಮಲ್ಪೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಉಡುಪಿಗೆ ಪ್ರವೇಶಿಸಿದ್ದರು. ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾನೆಂದು ತಿಳಿದುಬಂದಿದೆ. ಇನ್ನೊರ್ವ ಆರೋಪಿ ಉಸ್ಮಾನ್ ಇವರಿಗೆ ಉದ್ಯೋಗದ ವ್ಯವಸ್ಥೆ ಮಾಡಿದ್ದ ಎಂದು ತಿಳಿದುಬಂದಿದೆ. ಸದ್ಯ ಮಲ್ಪೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
