
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ.ಬಸ್ ಪಲ್ಟಿಯಾದ ಘಟನೆಯಲ್ಲಿ 13 ಮಂದಿಗೆ ಗಾಯವಾಗಿದ್ದು, ಅದರಲ್ಲಿ ಐವರಿಗೆ ಗಂಭೀರ ಸ್ವರೂಪದ ಏಟು ತಗುಲಿದ ಬಗ್ಗೆ ವರದಿಯಾಗಿದೆ.

ಬಿಸಿರೋಡು ವಿಲ್ಲಾಂಪುರ ರಾಜ್ಯ ಹೆದ್ದಾರಿಯ
ವಗ್ಗ ಸಮೀಪದ ಕೊಪ್ಪಳ ಎಂಬಲ್ಲಿ ಘಟನೆ ನಡೆದಿದೆ.
ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಆರಂಭದಲ್ಲಿ
ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ, ಸ್ಥಳೀಯ ಯುವಕರು ಬಸ್ಸಿನಿಂದ ಪ್ರಯಾಣಿಕರನ್ನು ಹೊರಗೆ ತೆಗೆಯಲು ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 13 ಮಂದಿ ಗಾಯಗಳು ಪ್ರಥಮ ಚಿಕಿತ್ಸೆ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪವನ್(30) ನಿಖಿತಾ (29) ಸುಧಾಮ (23) ಹೇಮಾವತಿ (43) ರಾಜಶ್ರೀ (27) ಶೋಭಾ ಶೆಟ್ಟಿ ( 48) ಕಸ್ತೂರಿ ( 68) ಹೇಮಲತಾ ( 40) ವಿಶ್ವನಾಥ ( 70) ಶಾಕೀರ್ (32) ಶಿಲ್ಪಾ ( 16) ಸ್ವಾತಿ ( 16) ತನುಶ್ರೀ (17) ಗಾಯಗೊಂಡವರು ಎಂದು ಅಧಿಕೃತವಾಗಿ ಹೇಳಲಾಗಿದೆ.
ಇದರಲ್ಲಿ ಶೋಭಾಶೆಟ್ಟಿ, ಕಸ್ತೂರಿ, ತನುಶ್ರೀ, ಶಾಕೀರ್ ಮತ್ತು ವಿಶ್ವನಾಥ ಒಟ್ಟು ಮೂವರಿಗೆ ಸ್ವಲ್ಪ ಮಟ್ಟಿಗೆ ಗಂಭೀರವಾಗಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಯ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಬಂಟ್ವಾಳ ಸಮುದಾಯ ಆಸ್ಪತ್ರೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಇಲ್ಲಿನ ವೈದ್ಯರ ತಂಡದವರು ತಿಳಿಸಿದ್ದಾರೆ.
ಇನ್ನುಳಿದಂತೆ ಶಿಲ್ಪಾ ಎಂಬರಿಗೆ ಎಲುಬು ಸಂಬಂಧಿತ ಚಿಕಿತ್ಸೆ ಅಗತ್ಯವಿದ್ದು ಈ ಬಗ್ಗೆ ಬಂಟ್ವಾಳ ಆಸ್ಪತ್ರೆಯಲ್ಲಿ ನೀಡುವದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿಭಾಗಕ್ಕೆ ಸೇರಿದ ಬಸ್ಸು ಅದಾಗಿದ್ದು, ಪಲ್ಟಿಯಾಗುವುದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ
