

ಈ ಬಾರೀ ಸುಳ್ಯ ದಸರಾ ಉತ್ಸವ ವೈಭವದಿಂದ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದು, 9 ದಿನಗಳು ಕೂಡ ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ಶಾರದೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದ್ದಾರೆ

ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಸರ ಉತ್ಸವದ ವಿವರ ನೀಡಿದರು. ಈ ಬಾರಿ ವಿಶೇಷವಾಗಿ ಮಹಿಳೆಯರೇ ನಡೆಸಿಕೊಡುವ ವಿಶೇಷ ಕಾರ್ಯಕ್ರಮ ಮಹಿಳಾ ದಸರಾ ಕಾರ್ಯಕ್ರಮ ನಡೆಯಲಿದೆ. ಮಕ್ಕಳ ದಸರಾ ಕೂಡ ಈ ಬಾರಿಯ ವಿಶೇಷತೆಯಾಗಿದೆ ಎಂದು ಹೇಳಿದ್ದಾರೆ.

ಅ.9ರಂದು ಬೆಳಿಗ್ಗೆ 9ಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು 10.17ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ. ಸಂಜೆ 3 ರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಕುಣಿತ ಭಜನೆಯೊಂದಿಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ.ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಬಳಿಕ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.

ಅ.10ರಂದು ಸಂಜೆ 7ರಿಂದ ನಾಟ್ಯ ನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಹಾಗು ಶಿಷ್ಯ ವೃಂದದವರಿಂದ ನೃತ್ಯ ಸಂಕಲ್ಪಂ.
ಅ.11ರಂದು ಪೂ.9 ರಿಂದ ಭಜನೋತ್ಸವ ನಡೆಯಲಿದೆ. ಸಂಜೆ 7 ರಿಂದ ಸಾಂಸ್ಕೃತಿಕ ವೈಭವ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ.12 ರಂದು ಬೆಳಿಗ್ಗೆ 6.30ರಿಂದ ಆಯುಧ ಪೂಜೆ ಬೆಳಿಗ್ಗೆ 9ರಿಂದ ಮಹಿಳಾ ದಸರ ನಡೆಯಲಿದೆ. ಇದರ ಅಂಗವಾಗಿ ತಾಲೂಕಿನ ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳು, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮಹಿಳೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆಸಂಜೆ 7ರಿಂದ ಭರತನಾಟ್ಯ ನೃತ್ಯ ವೈಭವ ‘ಅಷ್ಠಲಕ್ಷ್ಮಿ, ರಾತ್ರಿ 9ರಿಂದ ಮಹಿಳಾ ಯಕ್ಷಗಾನ ಶ್ರೀದೇವಿ ಮಹಿಷಮರ್ದಿನಿ ನಡೆಯಲಿದೆ.

ಅ.13 ರಂದು ಬೆಳಿಗ್ಗೆ 6.22ರಿಂದ ಪುಟಾಣಿಗಳಿಗೆ ಅಕ್ಷರಾಭ್ಯಾಸ. ಬೆಳಿಗ್ಗೆ 9ರಿಂದ ಮಕ್ಕಳ ದಸರಾ ನಡೆಯಲಿದೆ. ಇದರ ಅಂಗವಾಗಿ ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಮಕ್ಕಳ ಮೆರವಣಿಗೆ ನಡೆಯಲಿದೆ. ಬಳಿಕ ಮಕ್ಕಳ ಸಾಂಸ್ಕೃತಿಕ ವೈಭವ. ಸಂಜೆ 7.30ರಿಂದ ಡಾನ್ಸ್ ಡಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ.14ರಂದು ಸಂಜೆ 7 ರಿಂದ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ಕನ್ನಡ ನಾಟಕ ‘ಮಣಿಕಂಠ ಮಹಿಮೆ’ ಪ್ರಸ್ತುತಿಗೊಳ್ಳಲಿದೆ.
ಅ.15ರಂದು ಸಂಜೆ 6ರಿಂದ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಹಾಗೂ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಅ.16 ರಂದು ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. 7.30ರಿಂದ ಚಲನಚಿತ್ರ ಹಿನ್ನಲೆ ಗಾಯಕ ಸರಿಗಮಪ ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಜನಪ್ರಿಯ ಗಾಯಕರೊಂದಿಗೆ ಸಂಗೀತ ರಸಮಂಜರಿ ಸಂಗೀತ ಸೌರಭ ಕಾರ್ಯಕ್ರಮ ನಡೆಯಲಿದೆ.
ಅ.17ರಂದು ಶ್ರೀ ಶಾರದಾ ದೇವಿಯ ವಿಜ್ರಂಭಣೆಯ ಶೋಭಾ ಯಾತ್ರೆಯೊಂದಿಗೆ ಸುಳ್ಯ ದಸರಾ ಉತ್ಸವ ನಡೆಯಲಿದೆ 20 ಕ್ಕೂ ಹೆಚ್ಚು ಟ್ಯಾಬ್ಲೋ ಸಾಗಿಬರಲಿದ್ದು , ದೂರದೂರಿನಲ್ಲಿ ನಡೆಯುವ ದಸರ ಸಂಭ್ರಮ ಈ ಬಾರಿ ಸುಳ್ಯದಲ್ಲಿಯೇ ಕಾಣಬಹುದಾಗಿದೆ ಎಂದು ಹೇಳಿದ ಅವರು ,
ಸಾಂಸ್ಕೃತಿಕ ಸಂಭ್ರಮದ ಸಮಾರೋಪದ ದಿನ ಸಂಗೀತ ಲೋಕದ ದಿಗ್ಗಜರಾದ ಗುರುಕಿರಣ್, ಅರ್ಜುನ್ ಜನ್ಯ ಹಾಗೂ ಹಾಡುಗಾರ ವಿಜಯಪ್ರಕಾಶ್ ಅವರನ್ನು ಕರೆ ತರುವ ಪ್ರಯತ್ನ ನಡೆಯುತಿದೆ ಎಂದು ಹೇಳಿದರು.
ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್ ಅವರು ಮಾತನಾಡಿ ಈ ಬಾರಿ ದಸರಾ ಉತ್ಸವವನ್ನು ಅದ್ದೂರಿಯಾಗಿಸಲು ಎಲ್ಲರ ಸಹಕಾರ ಬೇಕಾಗಿದೆ. ಎಲ್ಲರೂ ಕುಟುಂಬ ಸಮೇತರಾಗಿ ಶೋಭಾಯಾತ್ರೆಯಲ್ಲಿ ಶ್ರೀ ದೇವಿ ಜೊತೆ ಹೆಜ್ಜೆ ಹಾಕಬೇಕು ,ನಿಮ್ಮ ಮನೆಯ ದಸರಾ ಎಂಬಂತೆ ಸಹಕರಿಸಬೇಕು, ಅಲ್ಲದೆ ಮುಖ್ಯ ರಸ್ತೆಯಲ್ಲಿ ವಾಹನ ನಿಲ್ಲಿಸದೆ ಸಹಕರಿಸಬೇಕು , ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಇಲಾಖೆಗಳು ಸಹಕರಿಸ ಬೇಕೆಂದರು.
ಕೃಷ್ಣ ಕಾಮತ್ ಮಾತನಾಡಿ ಎಲ್ಲರ ಸಹಕಾರ ಯಾಚಿಸಿದರು. ಗೋಕುಲ್ ದಾಸ್ ಮಾತನಾಡಿ ಸೌಹಾರ್ದತೆ ಸಾರುವಂತಾಗಲಿ ಎಂದರು. ಮಹಿಳಾ ಸಮಿತಿ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸಿಕೊಟ್ಟಿದ್ದಾರೆ. ಈ ಅವಕಾಶವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು. ಮಾದರಿ ದಸರಾ ಆಗಲಿ ಎಂದರು.
ಸುದ್ದಿಗೋಸ್ಟಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶಾರದಾಂಬಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶಾರದೋತ್ಸವ ಸಮಿತಿ ಕೋಶಾಧಿಕಾರಿ ಅಶೋಕ್ ಪ್ರಭು, ಎಂ.ಕೆ. ಸತೀಶ್, ರಾಜು ಪಂಡಿತ್, ಸುನಿಲ್ ಕೇರ್ಪಳ, ಗಣೇಶ್ ಆಳ್ವ, ಸಂದೇಶ್ ಕುರುಂಜಿ, ಸತೀಶ್ ಕೆ.ಜಿ., ಸನತ್ ಪೆರಿಯಡ್ಕ, ರಂಜಿತ್ ಎನ್.ಆರ್., ಶಿವನಾಥ್ ರಾವ್, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಶ್ರೀದೇವಿ ನಾಗರಾಜ್ ಭಟ್ ,ತೀರ್ಥರಾಮ ಜಾಲ್ಸೂರು,ಲತಾ ಮಧುಸೂದನ್, ಶೀಲಾ ಅರುಣ್ ಕುರುಂಜಿ ಮೊದಲಾದವರಿದ್ದರು.