
ಮಂಗಳೂರು: ದ.ಕ ಜಿಲ್ಲೆಯಲ್ಲಿ ಇ-ಆಟೋ ರಿಕ್ಷಾಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ ಕಳೆದ ಜು.26ರಂದು ಹೊರಡಿಸಿರುವ ಆದೇಶ ರದ್ದು ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ರಿಕ್ಷಾ ಚಾಲಕ -ಮಾಲಕರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಮಾರ್ಗಸೂಚಿ ಹಾಗೂ ಹೈಕೋರ್ಟಿನ ನಿರ್ದೇಶನದ ಮೇರೆಗೆ ಕಾನೂನು ಚೌಕಟ್ಟಿನೊಳಗೆ ಈ ಆದೇಶ ಹೊರಡಿಸಲಾಗಿದೆ. ಅದನ್ನು ಪ್ರಶ್ನಿಸಿ ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು.
ಕೇಂದ್ರ ಸರಕಾರ ದೇಶಾದ್ಯಂತ ಇ-ಆಟೋರಿಕ್ಷಾಗಳ ಮುಕ್ತ ಸಂಚಾರಕ್ಕೆ ಅಂದರೆ, ನಗರ(ವಲಯ-1) ಮತ್ತು ಗ್ರಾಮಾಂತರ (ವಲಯ-2) ಎಂದು ನಿರ್ಬಂಧಿಸದೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಮಂಗಳೂರಿನಲ್ಲೂ ಇ-ರಿಕ್ಷಾಗಳು ಮುಕ್ತವಾಗಿ ಸಂಚರಿಸಲು ಆದೇಶ ಹೊರಡಿಸಲಾಗಿದೆ. ಬೆಂಗಳೂರು ಸಹಿತ ರಾಜ್ಯದ ಎಲ್ಲೆಡೆಗಳಲ್ಲಿಯೂ ಇಂಥ ಅವಕಾಶವಿದೆ.
ಆದಾಗ್ಯೂ ತಮಿಳುನಾಡಿನಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು, ಅದೇ ಮಾದರಿಯಲ್ಲಿ ಇಲ್ಲಿಯೂ ನಿರ್ಬಂಧ ಹಾಕಬೇಕಾದರೆ ಅದು ರಾಜ್ಯ ಸರಕಾರದ ಹಂತದಲ್ಲಿ ಆಗಬೇಕು. ತಮಿಳುನಾಡು ಮಾದರಿಯಲ್ಲಿ ನಿರ್ಬಂಧ ಹಾಕಬೇಕು ಎಂದು ಚಿಕ್ಕಮಗಳೂರಿನ ರಿಕ್ಷಾ ಚಾಲಕರು ಮನವಿ ಸಲ್ಲಿಸಿದ್ದಾರೆ ಎಂದರು.