
ಕೊಝಿಕ್ಕೋಡ್: ಬ್ಯಾಂಕ್ ಮ್ಯಾನೇಜರ್ ಓರ್ವನು ತನ್ನ ಬ್ಯಾಂಕ್ ಶಾಖೆಯಲ್ಲಿ ಗಿರವಿಯಿಟ್ಟಿದ್ದ 17 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಪತಿಸ್ಟ್ರೀಟ್ ನಿವಾಸಿ ಮಾಧಾ ಜಯಕುಮಾರ್ (34) ಆರೋಪಿ.

ಜಯಕುಮಾರ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ. ಈತ ಬ್ಯಾಂಕ್‌ನಲ್ಲಿ ಗ್ರಾಹಕರು ಗಿರವಿಯಿಟ್ಟಿದ್ದ 26 ಕೆಜಿಗಳಷ್ಟು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಶಾಖೆಯಲ್ಲಿ ಮರು ಮೌಲ್ಯಮಾಪನ ಪ್ರಕ್ರಿಯೆ ನಡೆಸುತ್ತಿರುವ ಸಂದರ್ಭದಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಗ್ರಾಹಕರು ಗಿರವಿಯಿಟ್ಟಿದ್ದ ಅಸಲಿ ಚಿನ್ನವನ್ನು ನಕಲಿ ಚಿನ್ನದಿಂದ ಬದಲಾಯಿಸಿರುವುದು ಗೊತ್ತಾಗಿದೆ. ಈ ಸಂಬಂಧ ವಡಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್‌ನ ನೂತನ ವ್ಯವಸ್ಥಾಪಕ ವಿ.ಇರ್ಷಾದ್ ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ
