
ಮಂಗಳೂರು: ನಗರದ ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಮೇ 24ರಂದು ನಮಾಝ್ ನಿರ್ವಹಿಸಿದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸರು ಸ್ವಯಂ ಪ್ರೇರಿತವಾಗಿ (ಸುಮೋಟೊ) ದಾಖಲಿಸಿಕೊಂಡಿದ್ದ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.


ನಮಾಝ್ ನಿರ್ವಹಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಕದ್ರಿ ಪೊಲೀಸರು ಸ್ವಯಂ ಪ್ರೇರಿತ (ಕಲಂ 341,283,143,149)ವಾಗಿ ಪ್ರಕರಣ ದಾಖಲಿಸಿದ್ದರು.ಇದಕ್ಕೆ ಕರಾವಳಿಯ ಮುಸ್ಲಿಂ ವಲಯ ಮತ್ತು ಪ್ರಗತಿಪರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಸುಮೋಟೊ ಪ್ರಕರಣ ವಾಪಸ್ ಪಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು.
ಗುರುವಾರ ನಡೆದ ಬೆಳವಣಿಗೆಯಲ್ಲಿ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದನ್ನು ಪೊಲೀಸರು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಪೊಲೀಸ್ ಕಮಿಷನರ್ ಅವರಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ: ಈ ಮಧ್ಯೆ ಸಮಾಜದಲ್ಲಿ ಶಾಂತಿಭಂಗವನ್ನುಂಟು ಮಾಡಿದ ಆರೋಪದ ಮೇರೆಗೆ ಬಜರಂಗ ದಳದ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಸೆ.107 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ಸ್ಪೆಕ್ಟರ್ ಗೆ ರಜೆಯ ಸಜೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಇನ್ಸ್ಪೆಕ್ಟರ್ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ