ಯುವತಿಯರ ಫೋಟೋ ಮಾರ್ಫ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಅಪ್ರಾಪ್ತರು ಸೇರಿ ಮೂವರ ಬಂಧನ

ಯುವತಿಯರ ಫೋಟೋ ಮಾರ್ಫ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಅಪ್ರಾಪ್ತರು ಸೇರಿ ಮೂವರ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಮಾರ್ಫ್‌ ಮಾಡಿದ ಫೋಟೋಗಳನ್ನು ಹರಿಬಿಡುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿ ಮೂವರು ಆರೋಪಿಗಳನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲೂರು ಮೂಲದ ಆರೋಪಿ ಬಂಧಿತರು. ಉಳಿದಿಬ್ಬರು ಅಪ್ರಾಪ್ತರಾಗಿದ್ದು, ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಲಾಗಿದೆ. ಮೂವರು ಆರೋಪಿಗಳ ಪೈಕಿ ಓರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಉಳಿದಿಬ್ಬರು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮೂವರೂ ಸ್ನೇಹಿತರು.

ಮೂವರು ಆರೋಪಿಗಳು ಕ್ರೇಜ್‌ಗಾಗಿ ಯುವತಿಯರ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲವಾಗಿ ಮಾರ್ಫ್​ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಆರೋಪಿಗಳು ಇನ್ಸ್​ಸ್ಟಾಗ್ರಾಮ್ ಖಾತೆಯಿಂದ 15 ವರ್ಷದ ಬಾಲಕಿಯೊಬ್ಬಳ ಫೋಟೋ ತೆಗೆದುಕೊಂಡು ಅದನ್ನು ಅಶ್ಲೀಲ್‌ವಾಗಿ ಮಾರ್ಫ್‌ ಮಾಡಿ ನಕಲಿ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಬಾಲಕಿಯ ಪೋಷಕರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ದೂರು ದಾಖಲು ಮಾಡಿಕೊಂಡಿರುವ ಸೈಬರ್‌ ಕ್ರೈಂ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಆರೋಪಿಗಳಿಂದ ಮೂರು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್‌ ಕೊಡಿಸುವ ಮುನ್ನ ಯೋಚಿಸಬೇಕು. ಮಕ್ಕಳು ಮೊಬೈಲ್‌ ಫೋನ್‌ ಅನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಪೊಲೀಸ್​​ ಅಧಿಕಾರಿಗಳು ಎಚ್ಚರಿಸಿದ್ದಾರೆ

ರಾಜ್ಯ