
KSRTC ಬಸ್ ಚಾಲಕನೋರ್ವ ಬಸ್ ನ ಛಾವಣಿಯಿಂದ ಸೋರುತ್ತಿರು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ಬಸ್ ಚಲಾಯಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಬಸ್ ನ ಚಾಲಕ ಹಾಗೂ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ.

ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಮೊದಲೇ ಫ್ರೀ ಬಸ್ ಯೋಜನೆಯ ಮೇಲೆ ಟಾರ್ಗೆಟ್ ಇಟ್ಟಿದ್ದ ಎಲ್ಲರೂ ಎದ್ದು ಬಿದ್ದು ಈ ದೃಶ್ಯವನ್ನು ಹಂಚಿಕೊಂಡು KSRTC ಬಸ್ ಛಾವಣಿ ಸೋರುತ್ತಿದೆ, ಸರಿಪಡಿಸಲು ಸರ್ಕಾರದ ಬಳಿ ದುಡ್ಡಿಲ್ಲ ಎಂಬಂತ ಹಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದವು. ಸಾಕಷ್ಟು ಜನರು ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದರು.
ಇದೀಗ ಘಟನೆಯ ಹಿಂದಿನ ಸತ್ಯಾಂಶ ಬೆಳಕಿಗೆ ಬಂದಿದೆ. ಕೆಎ-25, ಎಫ್-1336 ನಂಬರಿನ ಬಸ್ ನ ಚಾಲಕ ಹನುಮಂತಪ್ಪ ಮತ್ತು ನಿರ್ವಾಹಕಿ ಅನಿತಾ ಬಸ್ ನಲ್ಲಿ ಜನರಿಲ್ಲದ ವೇಳೆ ರೀಲ್ಸ್ ಗಾಗಿ ಈ ವಿಡಿಯೋ ಮಾಡಿದ್ದರು. ಆದರೆ, ಇದೀಗ ರೀಲ್ಸ್ ನಿಂದಾಗಿ ಇಬ್ಬರೂ ಕೆಲಸ ಕಳೆದುಕೊಂಡಿದ್ದು, ಇಬ್ಬರನ್ನೂ ಅಮಾನತು ಮಾಡಲಾಗಿದೆ.
ಅಂದ ಹಾಗೆ ಬಸ್ಸಿನಲ್ಲಿ ರೀಲ್ಸ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾರಿಂದಲೂ ದೂರುಗಳು ಬಂದಿಲ್ಲ ಎನ್ನಲಾಗಿದೆ. ಆದರೆ ಸುಖಾಸುಮ್ಮನೆ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನೂ ಅಮಾನತು ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಎಸ್ ಆರ್ ಟಿಸಿ ಸಂಸ್ಥೆ, ನಿನ್ನೆ ಧಾರವಾಡ ಘಟಕದ ಬಸ್ ಸಂಖ್ಯೆ ಕೆಎ-25 ,ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಚಾಲಕ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಮಳೆ ಬರುತ್ತಿದ್ದ ಸಮಯದಲ್ಲಿ ಬಸ್ ನಲ್ಲಿ ಮನೋರಂಜನೆಗಾಗಿ ರೀಲ್ಸ್ ಮಾಡಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಕಂಡೆಕ್ಟರ್ ಛತ್ರಿ ಹಿಡಿದು ಚಾಲನೆ ಮಾಡಿದ್ದಾರೆ. ಇದನ್ನು ನಿರ್ವಾಹಕಿ ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ. ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
