ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!

ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!

ಮೇ 22: ಈ ಸೈಬರ್ ಕಳ್ಳರು ಎಷ್ಟು ಖತರ್ನಾಕ್ ಎಂದರೆ, ಜನ ಸಾಮಾನ್ಯರ ಖಾತೆಗಳಿಂದ ಹಣ ಎಗರಿಸಿದ ಬಳಿಕ ಜನರು ಪೋಲಿಸರಿಗೆ   ದೂರು ನೀಡಿದರೂ , ಪೋಲಿಸರಿಗೆ ಪತ್ತೆಮಾಡಲು ಸಾಧ್ಯವಾಗದ ಬಳಿಕ ಸೈಬರ್ ಕಳ್ಳರು ಪೋಲಿಸರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ತೊಡಗಿದ್ದಾರೆ, ಸಿನಿಮೀಯ ರೀತಿಯಲ್ಲಿ ನಮ್ಮದೇ ರಾಜ್ಯದ  ಡಿವೈಎಸ್‌ಪಿ ಒಬ್ಬರ ಬ್ಯಾಂಕ್ ಖಾತೆಗೆ  ಕನ್ನ ಹಾಕಿ ಸೈಬರ್ ಕಳ್ಳರು 15 ಲಕ್ಷಕ್ಕೂ ಅಧಿಕ ಹಣ ಎಗರಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಅವರ ಖಾತೆಯಿಂದಲೇ 15,98,761 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ. ಈ ಸಂಬಂಧ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಗೆ ಮುರಳೀಧರ್ ಅವರು ದೂರು ನೀಡಿದ್ದಾರೆ.

ಮಡಿಕೇರಿಯ ಕೆನರಾ ಬ್ಯಾಂಕ್ ಮುಖ್ಯಶಾಖೆ ಹಾಗೂ ಭಾಗಮಂಡಲದ ಶಾಖೆಯಲ್ಲಿ ಪಿ.ಕೆ.ಮುರಳೀಧರ್ ಖಾತೆಗಳನ್ನು ಹೊಂದಿದ್ದಾರೆ.

ನಡೆದಿದ್ದೇನು?: ಮೇ 20 ರಂದು ಮಧ್ಯಾಹ್ನ 1:30ರ ವೇಳೆಗೆ ಡಿವೈಎಸ್‌ಪಿ ಅವರ ಮೊಬೈಲ್ ಸಂಖ್ಯೆಗೆ ಖಾಲಿ ಮೆಸೇಜ್‌ಗಳು ಬಂದಿವೆ. ಇದಾದ ನಂತರ ತಮ್ಮ ಗಮನಕ್ಕೇ ಬಾರದೇ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಮಡಿಕೇರಿಯಲ್ಲಿರುವ ಕೆನರಾ ಬ್ಯಾಂಕ್ ಮುಖ್ಯಶಾಖೆ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಒಟ್ಟು 25 ವರ್ಗಾವಣೆಗಳ ಮೂಲಕ ಒಟ್ಟು 12,12,711 ರೂ. ಕೆನರಾಬ್ಯಾಂಕ್ ಭಾಗಮಂಡಲ ಶಾಖೆ ಖಾತೆಯಿಂದ ಬೆಳಿಗ್ಗೆ 10.28 ಗಂಟೆಯಿಂದ ಮಧ್ಯಾಹ್ನ 12.56 ಗಂಟೆವರೆಗೆ ಒಟ್ಟು 10 ವರ್ಗಾವಣೆ ಮೂಲಕ 3,88,050 ರೂ. ಎಗರಿಸಿದ್ದಾರೆ.

ಎರಡು ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು 15,98,761 ರೂ. ಹಣವನ್ನು ಸೈಬರ್ ಕಳ್ಳರು ಎಗರಿಸಿದ್ದಾರೆ. ಸದ್ಯ ಖದೀಮರನ್ನು ಪತ್ತೆ ಮಾಡಿ ತಮ್ಮ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಗೆ ಡಿವೈಎಸ್‌ಪಿ ಬಿ.ಕೆ ಮುರುಳಿಧರ್ ದೂರು ನೀಡಿದ್ದಾರೆ

ರಾಜ್ಯ