.

ಬಂಟ್ವಾಳ:ಕಳ್ಳನೋಟು ಚಲಾವಣೆ ಮಾಡಿ ವೈಟ್ ಮನಿಯನ್ನಾಗಿ ಪರಿವರ್ತನೆ ಮಾಡುತ್ತಿದ್ದ ಕೇರಳ ಮೂಲದ ಆರೋಪಿಗಳಿಬ್ಬರನ್ನು ಬಂಟ್ವಾಳ ಪೊಲೀಸ್ ತಂಡ ಬಂಧಿಸಿದ ಘಟನೆ ಶುಕ್ರವಾರ ರಾತ್ರಿ ವೇಳೆ ಬಿಸಿರೋಡಿನಲ್ಲಿ ನಡೆದಿದೆ.

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ನೇತೃತ್ವದ ಪೋಲೀಸರ ತಂಡ ಬಿಸಿರೋಡಿನಲ್ಲಿ ಕೇರಳ ಮೂಲದ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದ್ದು, ಇವರ ಜೊತೆ ಇದ್ದ ಎನ್ನಲಾಗಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾಸರಗೋಡು ಮೂಲದ ಚುರಿಕುಡ್ಲು ನಿವಾಸಿ ಮೊಹಮ್ಮದ್ ಹಾಗೂ ಕುಡ್ಲು ನಿವಾಸಿ ಕಮರುನ್ನೀಶಾ ಬಂಧಿತ ಆರೋಪಿಗಳಾಗಿದ್ದು, ಕಮರುನ್ನೀಶಾ ಅವರ ಪತಿ ಶರೀಫ್ ಎಂಬಾತ ಪರಾರಿಯಾಗಿರುವ ಆರೋಪಿಯಾಗಿದ್ದಾನೆ.
ಬಂಧಿತರಿಂದ 40 ಕ್ಕೂ ಅಧಿಕ ರೂ.500 ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಮೊಬೈಲ್ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಉಳಿದಂತೆ ಹೆಚ್ಚಿನ ಮಾಹಿತಿ ಪೋಲೀಸ್ ತನಿಖೆಯ ಬಳಿಕ ಹೊರಬರಬೇಕಾಗಿದೆ.
ಕಳ್ಳ ನೋಟು ವ್ಯವಹಾರ ಹೇಗೆ?..
ಕಾಸರಗೋಡು ಮೂಲದ ಒಂದೇ ಕುಟುಂಬದ ಮೂವರು ಆರೋಪಿಗಳು ಹುಂಡೈ ಕಂಪೆನಿಗೆ ಸೇರಿದ ಕ್ರೇಟಾ ಕಾರಿನಲ್ಲಿ ದ.ಕ.ಜಿಲ್ಲೆಗೆ ಬಂದು ಇಲ್ಲಿನ ಸಣ್ಣ ಸಣ್ಣ ಅಂಗಡಿಗಳಲ್ಲಿ ಪ್ರಮಾಣಿಕರಂತೆ ವ್ಯವಹಾರ ಮಾಡುತ್ತಿದ್ದಾರೆ. ಕಾಸರಗೋಡಿನಿಂದ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಹೊರಟ ಇವರು ಬಂಟ್ವಾಳ ತುಂಬೆಗೆ ಬಂದು ಅಲ್ಲಿನ ಅಂಗಡಿಯಲ್ಲಿ ವ್ಯವಹಾರ ನಡೆಸಿ ರಾತ್ರಿ ಸುಮಾರು 10 ಅಂದಾಜಿಗೆ ಬಿಸಿರೋಡಿಗೆ ಬಂದಿದ್ದಾರೆ ಇಲ್ಲಿನ ಸಣ್ಣ ಸಣ್ಣ ಅಂಗಡಿಗಳಲ್ಲಿ ಸಣ್ಣ ಪುಟ್ಟ ಸಾಮಾಗ್ರಿಗಳನ್ನು ಪಡೆಯುತ್ತಿದ್ದರು. ಈ ವೇಳೆ ಅಂಗಡಿಯವರಿಗೆ ಸಂಶಯ ಬಂದು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಂಡ ಹೆಂಡತಿ ಹಾಗೂ ಸಂಬಂಧಿಕ ಒಟ್ಟು ಮೂವರು ಸೇರಿಕೊಂಡು ಖೋಟಾ ನೋಟು ಚಲಾವಣೆಯ ದಂದೆಯಲ್ಲಿದ್ದಾರೆ.
ಒಂದು ಭಾಗದಲ್ಲಿ ಕಾರು ನಿಲ್ಲಿಸಿ ಮೂವರು ಪೇಟೆಯಲ್ಲಿರುವ ಬೇರೆ ಬೇರೆ ಅಂಗಡಿಗಳಿಗೆ ಹೋಗಿ 100 ಒಳಗಿನ ಪ್ಯಾನ್ಸಿ ಐಟಂಗಳನ್ನು ಖರೀದಿ ಮಾಡುತ್ತಾರೆ. 500 ರೂ ನೋಟನ್ನು ನೀಡಿ ಚಿಲ್ಲರೆ ವಾಪಾಸು ಪಡೆಯುತ್ತಾರೆ. ಹೀಗೆ ಖೋಟಾ ನೋಟನ್ನು ವೈಟ್ ಮನಿಯಾಗಿ ಪರಿವರ್ತನೆ ಮಾಡಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಇವರು ಪಡೆದುಕೊಂಡು ವಸ್ತುಗಳನ್ನು ಕಾಸರಗೋಡುವಿನಲ್ಲಿರುವ ಇವರ ಅಂಗಡಿಯಲ್ಲಿ ಮಾರಾಟಕ್ಕೆ ಉಪಯೋಗಿಸುತ್ತಾರೆ. ಇದಿಷ್ಟು ಮಾಹಿತಿಯನ್ನು ಅವರು ನೀಡಿದ್ದಾರೆ ಎಂದು ಹೇಳಲಾಗಿದೆ.
ಪೋಲೀಸರು ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರ ಮಾಡಿದಾಗ ಇವರ ಖೋಟಾ ನೋಟು ದಂದೆ ಬಯಲಾಗಿದೆ. ಇದೀಗ ಇದರ ಜಾಲವನ್ನು ಪತ್ತೆಹಚ್ಚುವ ಕಾರ್ಯವನ್ನು ಮುಂದುವರಿಸಿದ್ದು ಪರಾರಿಯಾದ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ
