ವಿಶೇಷ ವರದಿ – ಶಶಿಕಲಾ ಮಂಜುನಾಥ್

ಇಂದು ಎಪ್ರಿಲ್ 25. ವಿಶ್ವ ಮಲೇರಿಯಾ ದಿನ. ಮಲೇರಿಯಾ ದಿನದ ಆಚರಣೆ ಪ್ರಾರಂಭವಾದದ್ದು ಆಫ್ರಿಕಾದಲ್ಲಿ. ಅಲ್ಲಿನ ಸರಕಾರವು 2001ರಿಂದ ಈ ದಿನವನ್ನು “ಆಫ್ರಿಕಾ ಮಲೇರಿಯಾ ದಿನ“ವೆಂದು ಆಚರಿಸಿಕೊಂಡು ಬಂದಿದೆ. ಬಳಿಕ ಇದೇ ದಿನವನ್ನು 2007 ರ ಮೇ ತಿಂಗಳಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ 60ನೇ ಅಧಿವೇಶನದಲ್ಲಿ “ವಿಶ್ವ ಮಲೇರಿಯಾ ದಿನ” ಎಂದು ಅಂಗೀಕರಿಸಲಾಯಿತು. ಮಲೇರಿಯಾ ಕುರಿತು ಆರಿವು ಮೂಡಿಸುವುದು, ಮಲೇರಿಯಾ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮುದಾಯ- ಆಧಾರಿತ ಚಟುವಟಿಕೆಗಳನ್ನು ಒಳಗೊಂಡಂತೆ, ರಾಷ್ಟ್ರೀಯ ಮಲೇರಿಯಾ-ನಿಯಂತ್ರಣ ತಂತ್ರಗಳನ್ನು ಜಾರಿಗೊಳಿಸುವ ಬಗ್ಗೆ ಮಾಹಿತಿಯನ್ನು ಹರಡುವುದು ಈ ದಿನದ ಮುಖ್ಯ ಉದ್ದೇಶ.
ಬನ್ನಿ, ಈ ವಿಶ್ವ ಮಲೇರಿಯಾ ದಿನದಂದು, ಮಲೇರಿಯಾ ಬಗ್ಗೆ ಕೆಲವು ಅಂಶಗಳನ್ನು ತಿಳಿದುಕೊಳ್ಳೋಣ;

ಮಲೇರಿಯಾ ಪರಾವಲಂಬಿಯಿಂದ ಉಂಟಾಗುವ ಗಂಭೀರ ಮತ್ತು ಮಾರಣಾಂತಿಕವೂ ಆಗಬಹುದಾದ ಒಂದು ಕಾಯಿಲೆ. ಇದು ಅನಾಫಿಲೀಸ್ ಎಂಬ ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಸೋಂಕಿತ ಅನಾಫಿಲೀಸ್ ಸೊಳ್ಳೆಯಲ್ಲಿ ಪ್ಲಾಸ್ಮೋಡಿಯಮ್ ಎಂಬ ಪರಾವಲಂಬಿ ಇರುತ್ತದೆ. ಸೋಂಕಿತ ಅನಾಫಿಲೀಸ್ ಸೊಳ್ಳೆ ನಮ್ಮನ್ನು ಕಚ್ಚಿದಾಗ, ಅದು ನಮ್ಮ ರಕ್ತವನ್ನು ಸೇರುತ್ತದೆ. ನಮ್ಮ ದೇಹವನ್ನು ಸೇರಿದ ಈ ಪರಾವಲಂಬಿ ನಮ್ಮ ಯಕೃತ್ (ಲಿವರ್) ಅನ್ನು ಸೇರಿ, ಅಲ್ಲಿ ಬೆಳೆಯಲಾರಂಭಿಸುತ್ತದೆ. ಕೆಲವು ದಿನಗಳ ಬಳಿಕ ಅವು ನಮ್ಮ ರಕ್ತವನ್ನು ಸೇರಿ, ಕೆಂಪು ರಕ್ತಕಣಗಳಿಗೆ ಸೋಂಕು ಉಂಟುಮಾಡುತ್ತವೆ. ಸೋಂಕು ತಗುಲಿದ 48 ರಿಂದ 72 ಗಂಟೆಗಳಲ್ಲಿ, ಪರಾವಲಂಬಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿ, ನಮ್ಮ ದೇಹವನ್ನೆಲ್ಲಾ ಆವರಿಸಿಕೊಳ್ಳುತ್ತವೆ.
ಮಲೇರಿಯಾ ರಕ್ತದ ಮೂಲಕ ಹರಡುತ್ತದೆಯಾದರೂ, ಇದು ಅಂಗಗಳ ಕಸಿ, ಒಂದೇ ಇಂಜೆಕ್ಷನ್ ಸಿರಿಂಜ್ ಅಥವಾ ಸೂಜಿಯನ್ನು ಅನೇಕರು ಬಳಸಿದಾಗಲೂ ಹರಡುತ್ತದೆ.
ಮಲೇರಿಯಾ ಲಕ್ಷಣಗಳು:
> ವಿಪರೀತ ಚಳಿ
> ಅತೀವ ಜ್ವರ
> ಬೆವರುವಿಕೆ
> ತಲೆನೋವು
> ವಾಕರಿಕೆ
> ವಾಂತಿ
> ಹೊಟ್ಟೆ ನೋವು
> ಅತಿಸಾರ
> ರಕ್ತಹೀನತೆ
> ಮೈಕೈ ನೋವು
ಮಲೇರಿಯಾವನ್ನು ನಿಯಂತ್ರಿಸುವುದಕ್ಕೆ ಯಾವುದೇ ಲಸಿಕೆಗಳಿಲ್ಲ. ಚಿಕಿತ್ಸೆಯಿಂದಲೇ ಸಂಪೂರ್ಣವಾಗಿ ಗುಣಮುಖರಾಗಬಹುದು. ಮಲೇರಿಯಾ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದರೂ, ಇದನ್ನು ತಡೆಗಟ್ಟಬಹುದು ಮತ್ತು ನಿಯಂತ್ರಿಸಬಹುದಾಗಿದೆ.
ಬನ್ನಿ, ಮಲೇರಿಯನ್ನು ನಿಯಂತ್ರಿಸುವುದಕ್ಕೆ ನಾವು ಕೈಗೊಳ್ಳಬಹುದಾದ ಕೆಲವು ಮುಂಜಾಗೃತ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ;
> ಕೀಟನಾಶಕಗಳನ್ನು ಬಳಸುವುದು
> ಉದ್ದನೆಯ ತೋಳುಗಳಿರುವ ಉಡುಗೆಗಳನ್ನು ಬಳಸುವುದು
> ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸುವುದು
> ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು.
ಈ ದಿನ ಮಲೇರಿಯಾ ಎಂಬ ಮಾರಣಾಂತಿಕ ರೋಗದ ವಿರುದ್ಧ ಎಲ್ಲರೂ ಒಟ್ಟಾಗಿ, ಮಲೇರಿಯಾ – ಮುಕ್ತ ಪ್ರಪಂಚ ನಿರ್ಮಾಣದತ್ತ ಸಾಗುವುದಕ್ಕೆ ಅನುವು ಮಾಡಿಕೊಡುತ್ತದೆ. ಮಲೇರಿಯಾ ಬಗ್ಗೆ ತಿಳಿದುಕೊಳ್ಳುವುದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅದನ್ನು ನಿಯಂತ್ರಿಸುವ ಹೋರಾಟದಲ್ಲಿ ಕೈಜೋಡಿಸಿ, ಆರೋಗ್ಯಕರ ಪ್ರಪಂಚಕ್ಕೆ ನಮ್ಮ ಅಳಿಲು ಸೇವೆಯನ್ನು ಮಾಡಬಹುದು.

