ಬಟ್ಟೆ ವ್ಯಾಪಾರ ಮಾಡಲು ಮನೆಗೆ ಬಂದ ಮೂವರು ಹಿಂದಿ ಭಾಷಿಕರಿಗೆ   ಸ್ಥಳೀಯರಿಂದ ಧರ್ಮದೇಟು

ಬಟ್ಟೆ ವ್ಯಾಪಾರ ಮಾಡಲು ಮನೆಗೆ ಬಂದ ಮೂವರು ಹಿಂದಿ ಭಾಷಿಕರಿಗೆ ಸ್ಥಳೀಯರಿಂದ ಧರ್ಮದೇಟು

ಗ್ರಾಮೀಣ ಭಾಗಗಳಲ್ಲಿ ತಿರುಗು ವ್ಯಾಪಾರಿಗಳು ಮನೆ ಮನೆಗೆ ಬಟ್ಟೆ ಬರೆಗಳನ್ನು ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುವುದು ಬಹಳ ಕಡೆಗಳಲ್ಲಿ ನಮಗೆ ನಿತ್ಯ ಕಾಣಸಿಗುತ್ತದೆ. ಇತ್ತೀಚೆಗೆ ಯುವಕನೊಬ್ಬ ಬಟ್ಟೆ ಮಾರಾಟಕ್ಕೆ ಎಂದು ಮನೆಗೆ ಬಂದು ಮನೆಯಲ್ಲಿ ಇರುವ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದ ವಿಚಾರವಾಗಿ ಮನೆಯವರು ಹಾಗೂ ಸ್ಥಳೀಯ ಯುವಕರು ಸೇರಿ ವ್ಯಾಪಾರಕ್ಕೆ ಬಂದಿರುವ ಯುವಕರಿಗೆ ಧರ್ಮದೇಟು ನೀಡಿ ಕಳುಹಿಸಿರುವ ಘಟನೆ ಸುಳ್ಯದ ಅಮರಪಡ್ನೂರಿನ ಜೋಗಿಯಡ್ಕ ಎಂಬಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಹಿಂದಿ ಭಾಷೆಯಲ್ಲಿ ಮಾತನಾಡುವ ಯುವಕರ ತಂಡ ಬಟ್ಟೆಗಳನ್ನು ಬೈಕಿನಲ್ಲಿರಿಸಿಕೊಂಡು ಮನೆ ಮನೆಗೆ ಬಂದು ವ್ಯಾಪಾರ ಮಾಡುತ್ತಿದ್ದರು. ಕಳೆದ ವಾರ ಹಾಗೆ ಬಂದ ಯುವಕನೊಬ್ಬ ಜೋಗಿಯಡ್ಕ ಪರಿಸರದಲ್ಲಿ ಇರುವ ಮನೆಗೆ ಬಂದು ಬಟ್ಟೆ ತೆಗೆದುಕೊಳ್ಳುವಂತೆ ಒತ್ತಾಯಿಸಿದುದಲ್ಲದೆ ಮನೆಯಲ್ಲಿ ಒಬ್ಬಳೇ ಯುವತಿ ಇರುವುದನ್ನು ಗಮನಿಸಿಕೊಂಡು ನೀರು ಕೇಳಿರುವುದಲ್ಲದೆ ನೀನು ಹಣ ಕೊಡುವುದು ಬೇಡ ಬಟ್ಟೆ ತೆಗೆದುಕೊಳ್ಳುವಂತೆ ಒತ್ತಾಯಿಸುವ ಮೂಲಕ ಅಶ್ಲೀಲ ಪದ ಬಳಕೆ ಮಾಡಿ ಅನುಚಿತವಾಗಿ ವರ್ತಿಸಿದ್ದ ಎಂದು ಹೇಳಲಾಗಿದೆ.ಈ ವಿಷಯವನ್ನು ಯುವತಿ ತನ್ನ ಮನೆಯವರು ಬಂದ ಮೇಲೆ ತಿಳಿಸಿದ್ದಳು. ಮತ್ತೆ ಅದೇ ಯುವಕರ ತಂಡ ಎ.3 ರಂದು ಚೊಕ್ಕಾಡಿ ರಸ್ತೆಯಲ್ಲಿ ಬಂದಿರುವ ವಿಷಯ ತಿಳಿದ ಸ್ಥಳೀಯ ಯುವಕರು ಸೇರಿ ಅವರಲ್ಲಿ ವಿಚಾರಿಸಿ ಮೂರು ಮಂದಿಗೂ ಧರ್ಮದೇಟು ನೀಡಿದಾಗ ಯುವಕರು ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿರುವುದಾಗಿ ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ತಿರುಗು ವ್ಯಾಪಾರದ ಸೋಗಿನಲ್ಲಿ ಮನೆ ಮನೆಗೆ ಬಂದು ಪರಿಸ್ಥಿತಿ ಬಗ್ಗೆ ತಿಳಿದುಕೊಂಡು ದರೋಡೆ ಕೊಲೆ ಮಾಡಿರುವ ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಿರುವುದು. ಇಂತಹ ಅಪರಿಚಿತ ತಿರುಗು ವ್ಯಾಪಾರಿಗಳು ಅಥವಾ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಗಮನ ಹರಿಸಿಕೊಂಡು ಸಂಬಂದಿಸಿದ ಇಲಾಖೆಗೆ ಮಾಹಿತಿ ನೀಡುವಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ.

ರಾಜ್ಯ