
ಕಡಬ: ಸ್ಫೋಟಕ ಸಿಡಿಸಿ ಕಲ್ಲು ಒಡೆದ ಪರಿಣಾಮ ಅದರ ಚೂರುಗಳು ತಾಗಿ ಮನೆಗೆ ಹಾನಿಯಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದೆ.ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಕುಕ್ಕಪ್ಪನ ಮನೆಯ ಆನಂದ ಗೌಡ ಅವರು ಈ ಬಗ್ಗೆ ಠಾಣೆಗೆ ದೂರು ನೀಡಿದವರು.

ತನ್ನ ಮನೆಯ ಸಮೀಪ ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ದಯಾನಂದ ಕುಕ್ಕಪ್ಪನ ಮನೆ ಅವರು ಜಾಗವನ್ನು ಹೊಂದಿದ್ದು, ಆ ಜಾಗದಲ್ಲಿ ಸುಮಾರು ಎರಡು ತಿಂಗಳಿನಿಂದ, ಅವರ ಜಾಗದಲ್ಲಿದ್ದ ಕಲ್ಲುಗಳನ್ನು, ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆದು, ಸೈಜು ಕಲ್ಲುಗಳನ್ನಾಗಿ ತಯಾರಿಸುತ್ತಿದ್ದರು.ಈ ಕಲ್ಲುಗಳನ್ನು ಸ್ಫೋಟಕ ಬಳಸಿ ಒಡೆಯುವ ಸಮಯದಲ್ಲಿ ಕಲ್ಲುಗಳು ಸ್ಫೋಟಗೊಂಡು ಸಿಡಿದ ಕಲ್ಲಿನ ಚೂರುಗಳು ಆನಂದ ಅವರ ಮನೆಯ ಎದುರುಗಡೆ ಶೀಟುಗಳ ಮೇಲೆ ಬಿದ್ದು, ಎರಡು ಶೀಟುಗಳು ಹಾನಿಗೊಂಡಿರುತ್ತದೆ ಹಾಗೂ ಕಲ್ಲು ಹುಡಿಯಿಂದ ಪರಿಸರ ಮಾಲಿನ್ಯ ಉಂಟಾಗಿರುತ್ತದೆ ಎಂಬುದಾಗಿ ಠಾಣೆಗೆ ದೂರು ನೀಡಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
