ಕಡಬದಲ್ಲಿ ಹೆಬ್ಬಾವೆಂದು ಅಟ್ಟಾಡಿಸಿಕೊಂಡು ಹೋದ ಯುವಕರ ಕಂಡು ಬುಸುಗುಟ್ಟಿದ ಹಾವು!

ಕಡಬದಲ್ಲಿ ಹೆಬ್ಬಾವೆಂದು ಅಟ್ಟಾಡಿಸಿಕೊಂಡು ಹೋದ ಯುವಕರ ಕಂಡು ಬುಸುಗುಟ್ಟಿದ ಹಾವು!

ಕಡಬ ಸಮೀಪದ ಕೋಡಿಂಬಾಳ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಮೂರಾಜೆ ಪಟ್ನದ ನಿವಾಸಿಗಳು ಯಶಸ್ವಿಯಾಗಿದ್ದಾರೆ‌.ಹಲವು ಸಮಯಗಳಿಂದ ಹಾವೊಂದು ಓಡಾಟ ಮಾಡುತ್ತಿರುವ ಬಗ್ಗೆ ಸುದ್ದಿ ಹರಡಿತ್ತು. ಮಾ.23 ರಂದು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಬುಸುಗುಟ್ಟುವ ಸದ್ದು ಕೇಳಿದೆ. ಸ್ಥಳೀಯರು ಹೆಬ್ಬಾವೆಂದು ಭಾವಿಸಿ ಅಟ್ಟಿಸಿಕೊಂಡು ಹೋಗಿದ್ದು ನಂತರ ಕಾಳಿಂಗಸರ್ಪವೆಂದು ಅರಿವಿಗೆ ಬಂದಿದೆ.

ಕೊನೆಗೂ ಏಳು ಗಂಟೆಗಳ ನಿರಂತರ ಶ್ರಮದಿಂದ ಉರಗ ರಕ್ಷಕ ಸುಬ್ರಹ್ಮಣ್ಯದ ಗೋಪಾಲ ಎಂಬವರ ಸಹಕಾರದೊಂದಿಗೆ ಬೃಹತ್ ಗಾತ್ರದ ಹಾವನ್ನು ಅಲ್ಲಿನ ನಿವಾಸಿಗಳು ಸರೆ ಹಿಡಿದಿದ್ದಾರೆ. ಮರವೇರುತ್ತಿದ್ದ ಈ ಬೃಹತ್ ಹಾವನ್ನು ಹಿಡಿಯಲು ಯತ್ನಿಸಿದ ವೇಳೆ ದಾಳಿ ಮಾಡುವ ಹಂತಕ್ಕೂ ಹಾವು ಮುಂದಾಗಿದ್ದು ನಾಜೂಕಿನಿಂದ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಸುಮಾರು 13 ಅಡಿಯಷ್ಟು ಉದ್ದವಿದ್ದ ಕಾಳಿಂಗ ಸರ್ಪವನ್ನು ಹಿಡಿದ ಬಳಿಕ ಹಲವು ಮಂದಿ ಕುತೂಹಲದಿಂದ ನೋಡಲು ಬಂದಿದ್ದು ಯುವಕರು ಹಾವನ್ನು ಮುಟ್ಟಿ ಪೋಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಹಾರ ಹುಟುಕಾಡುತ್ತಾ ಪ್ರಾಣಿಯೊಂದನ್ನು ಬೆನ್ನಟ್ಟುತ್ತಾ ಈ ಕಾಳಿಂಗ ಸರ್ಪ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಬೃಹತ್ ಗಾತ್ರದ ಹಾವನ್ನು ಸುರಕ್ಷಿತವಾಗಿ ಸುಬ್ರಹ್ಮಣ್ಯ ಸಮೀಪದ ದಟ್ಟ ಕಾಡಿನಲ್ಲಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ