
ಮಂಗಳೂರು (ಸೌದಿ ಅರೇಬಿಯಾ ) : ಪವಿತ್ರ ಉಮ್ರಾಯಾತ್ರೆ ಕೈಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೀಡಾಗಿದೆ. ಭೀಕರವಾಗಿ ನಡೆದ ಈ ಅಪಘಾತದಲ್ಲಿ ಹಳೆಯಂಗಡಿಯ ತೋಕೂರಿನ ಒಂದೇ ಕುಟುಂಬದ ನಾಲ್ವರು ಇಹಲೋಕ ತ್ಯಜಿಸಿದ್ದಾರೆ. ನಲುವತ್ತು ದಿನದ ಮಗು ಸಹಿತ ನಾಲ್ವರು ಇಹಲೋಕ ತ್ಯಜಿಸಿದ್ದು, ಮತ್ತೊಂದು ಮಗು ತೀವ್ರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಸೌದಿ ಅರೇಬಿಯಾದ ತಾಯಿಫ್ ಬಳಿ ಈ ಕಾರು ಅಪಘಾತ ನಡೆದಿದ್ದು, ಕಾರು ಕತಾರ್‌ನಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡುತ್ತಿತ್ತು. ಗುರುವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದೆ. ತಾಯಿಫ್ ನಿಂದ ಸುಮಾರು 160 ಕಿಲೋ ಮೀಟರ್ ದೂರದಲ್ಲಿ ಈ ಅಪಘಾತ ನಡೆದಿದ್ದು, ಹಳೆಯಂಗಡಿಯ ತೋಕೂರು ಶಾಲೆಯ ಪಕ್ಕದ ನಿವಾಸಿಗಳು ಉಮ್ರಾ ನಿರ್ವಹಿಸಲು ಪ್ರಯಾಣಿಸುತ್ತಿದ್ದರು.ಕಾರಿನಲ್ಲಿ ನಲವತ್ತು ದಿನದ ಮಗುವಿನ ಸಹಿತವಾಗಿ ಕುಟುಂಬ ಪ್ರಯಾಣ ಮಾಡುತ್ತಿತ್ತು. ಅಪಘಾತದ ಸುದ್ದಿ ತಿಳಿದ ಹಳೆಯಂಗಡಿ ಪರಿಸರದಲ್ಲಿ ಮೌನ ಮನೆ ಮಾಡಿದೆ.
