ಕಡಬ : ವಿದ್ಯಾರ್ಥಿನಿಯರಿಗೆ ಆ್ಯಸಿಡ್‌ ಎರಚಿದ ಕಿರಾತಕ ಜೈಲುಪಾಲು

ಕಡಬ : ವಿದ್ಯಾರ್ಥಿನಿಯರಿಗೆ ಆ್ಯಸಿಡ್‌ ಎರಚಿದ ಕಿರಾತಕ ಜೈಲುಪಾಲು

ಕಡಬ : ಪ್ರೀತಿ ನಿರಾಕರಣೆಯ ಆಕ್ರೋಶದಿಂದ ಮಾ. 4ರಂದು ಬೆಳಗ್ಗೆ ಕಡಬ ಸರಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯರ ಆ್ಯಸಿಡ್‌ ಎರಚಿದ ಆರೋಪಿ ಅಬಿನ್ ನನ್ನು ಪೊಲೀಸರು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ವಾಯಿಕಡವು ಗ್ರಾಮದ ಅಡಕ್ಕರ ನಿವಾಸಿ ಅಬಿನ್‌ ಸಿಬಿ (22) ತನ್ನ ಊರಿನಿಂದ ರೈಲಿನ ಮೂಲಕ ತಮಿಳುನಾಡಿನ ಕೊಯಮತ್ತೂರಿಗೆ ತೆರಳಿ ಆ್ಯಸಿಡ್‌ ಖರೀದಿಸಿ ತಂದಿರುವುದು ಪೊಲೀಸರ ತನಿಖೆಯ ವೇಳೆ ಬಯಲಾಗಿತ್ತು. ಘಟನೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಹೆಚ್ಚಿನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ಪಡೆದಿದ್ದರು.

ತಮಿಳುನಾಡಿನಲ್ಲಿ ಆರೋಪಿಗೆ ಆ್ಯಸಿಡ್‌ ನೀಡಿದ್ದ ಅಂಗಡಿಯ ಮಾಲಕ ಹಾಗೂ ಇನ್ನೋರ್ವನನ್ನು ವಶಕ್ಕೆ ಪಡೆದು ಕಡಬಕ್ಕೆ ಕರೆತಂದಿರುವ ಪೊಲೀಸರು ಅವರಿಂದ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಪ್ರೇಮಿಗಳ ದಿನದಂದೇ ಈತ ಆಸಿಡ್ ಖರೀದಿ ಮಾಡಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ಎರಚಿ ಪರಾರಿಯಾಗಲೆತ್ನಿಸಿದಾಗ ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆತನ ಬ್ಯಾಗನ್ನು ಪರಿಶೀಲಿಸಿದಾಗ ಒಂದು ಬುರ್ಖಾ ಹಾಗೂ ಚೂರಿ ಪತ್ತೆಯಾಗಿತ್ತು.

ಒಂದು ವೇಳೆ ಆ್ಯಸಿಡ್‌ ದಾಳಿ ನಡೆಸಲು ಸಾಧ್ಯವಾಗದಿದ್ದರೆ ಆತ ತನ್ನ ಗುರಿಯಾಗಿದ್ದ ವಿದ್ಯಾರ್ಥಿನಿಯ ಮೇಲೆ ಚೂರಿಯಿಂದ ದಾಳಿ ಮಾಡುವ ಸಾಧ್ಯತೆಗಳಿತ್ತು ಹಾಗೂ ಘಟನೆಯ ಬಳಿಕ ತನ್ನ ಗುರುತು ಸಿಗದಂತೆ ಬುರ್ಖಾ ಧರಿಸಿ ಪರಾರಿಯಾಗುವ ಉದ್ದೇಶದಿಂದ ಬುರ್ಖಾ ತಂದಿದ್ದ ತನಿಖೆಯಲ್ಲಿಆರೋಪಿ ಸಬಿನ್ ಬಾಯ್ಬಿಟ್ಟಿದ್ದಾನೆ.ಇತ್ತ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ಥರು ಚೇತರಿಸಿಕೊಳ್ಳುತ್ತಿದ್ದಾರೆ.

ರಾಜ್ಯ