
ಬೆಳ್ತಂಗಡಿ: ಮಾ.13 ರಂದು ರಾತ್ರಿ ವೇಳೆ ಬೈಕ್ ಸವಾರರೊಬ್ಬರಿಗೆ ಕಾಡಾನೆ ಎದುರಾಗಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಕಡಿರುದ್ಯಾವರ ಗ್ರಾಮದ ಜೋಡು ನೆರಳು ಬೊಳ್ಳೂರು ಬೈಲು ಎಂಬಲ್ಲಿ ಇಲ್ಲಿನ ಕೃಷಿಕ ಜಾರ್ಜ್ ಕೆ.ಜೆ. ಎಂಬವರು ತನ್ನ ಮಕ್ಕಳನ್ನು ರಾತ್ರಿ 8 ಗಂಟೆ ಸುಮಾರಿಗೆ ಬೆದ್ರಬೆಟ್ಟು ಕಡೆಯಿಂದ ಟ್ಯೂಷನ್ ಮುಗಿಸಿ ಬೈಕ್ ನಲ್ಲಿ ಕರೆದುಕೊಂಡು ಬರುವ ವೇಳೆ ರಸ್ತೆ ಮಧ್ಯದಲ್ಲಿ ಕಾಡಾನೆ ಎದುರಾಗಿದೆ.ರಸ್ತೆಯ ತಿರುವಿನಲ್ಲಿ ಬೈಕ್ ಸವಾರನಿಗೆ ಸುಮಾರು 5 ಅಡಿ ಅಂತರದಲ್ಲಿ ಕಾಡಾನೆ ಕಂಡುಬಂದಿದ್ದು ಜತೆಯಲ್ಲಿ ಮಕ್ಕಳು ಇದ್ದ ಕಾರಣ ಸವಾರ ಸಂಪೂರ್ಣ ಕಂಗಲಾಗಿದ್ದಾರೆ.
ರಸ್ತೆಯಲ್ಲಿ ತಿರುಗಾಡುತ್ತಿದ್ದ ಕಾಡಾನೆ ಕೊಂಚ ಸಮಯದ ಬಳಿಕ ಗುಡ್ಡದತ್ತ ತೆರಳಿತು.ಇಲ್ಲಿಂದ ಮುಂದುವರಿದ ಕಾಡಾನೆ ಲಿಜೋ ಸ್ಕರಿಯ ಎಂಬವರ ತೋಟಕ್ಕೆ ನುಗ್ಗಿ ತೆಂಗಿನ ಮರ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿದ್ದು, ಇಂದಬೆಟ್ಟಿನತ್ತ ತೆರಳಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ.-ಬೀದಿ ದೀಪ ಇಲ್ಲ-ಮುಂಡಾಜೆ-ದಿಡುಪೆ ರಸ್ತೆಯು ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿದ್ದು ಇಲ್ಲಿ ಅಗತ್ಯ ಸ್ಥಳಗಳಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ.
ಇಲ್ಲಿನ ಗ್ರಾಮಗಳಲ್ಲಿ ಕಾಡಾನೆ ಸಹಿತ ಹಲವು ವನ್ಯ ಮೃಗಗಳು ರಸ್ತೆಯುದ್ದಕ್ಕೂ ಸಂಚರಿಸುವುದು ಆಗಾಗ ನಡೆಯುತ್ತದೆ. ಬೀದಿ ದೀಪಗಳು ಉರಿಯುತ್ತಿದ್ದರೆ ಇವುಗಳ ಇರುವಿಕೆ ಕೊಂಚ ದೂರದಿಂದಲೇ ಕಂಡುಬರುತ್ತದೆ. ಆದರೆ ಇಲ್ಲಿ ಕೆಲವೆಡೆ ಬೀದಿ ದೀಪಗಳು ಇದ್ದರೂ ಅವು ಉರಿಯುತ್ತಿಲ್ಲ ಅವುಗಳನ್ನು ತಕ್ಷಣ ದುರಸ್ತಿಪಡಿಸಬೇಕು ಹಾಗೂ ಅಗತ್ಯ ಸ್ಥಳಗಳನ್ನು ಗುರುತಿಸಿ ಬೀದಿ ದೀಪಗಳನ್ನು ಅಳವಡಿಸುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.
