
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ, ಕರ್ನಾಟಕ ಬ್ಯಾಂಕಿನಲ್ಲಿ ನಡೆದ ನಗದು ಹಾಗೂ ಚಿನ್ನಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಆರೋಪಿಗಳಾದ ಬಂಟ್ವಾಳ ತಾಲೂಕಿನ ಗೂಡಿನಬಳಿಯ ಮಹಮ್ಮದ್ ರಫೀಕ್ ( 35), ಕೇರಳ ಮಂಜೇಶ್ವರ ತಾಲೂಕಿನ ಬಿಂಗಿನಾನಿ ನಿವಾಸಿ ಇಬ್ರಾಹಿಂ ಕಲಂದರ್ (41) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಗಾಳಿಯಡ್ಕದ ದಯಾನಂದ ಎಸ್ (37), ಎಂಬವರನ್ನು ಬಂಧಿಸಲಾಗಿದ್ದು,ತನಿಖೆ ಮುಂದುವರಿದಿದೆ.

ಕೇರಳ ರಾಜ್ಯದ ಕಾಸರಗೋಡಿನಿಂದ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಬ್ರೀಝಾ ಕಾರಿನಲ್ಲಿ ಬಂದ ಆರೋಪಿಗಳು ಬ್ಯಾಂಕಿನ ಹಿಬ್ಬಂದಿಯ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿ ಲಾಕರ್ ಬ್ರೇಕ್ ಮಾಡಿ, ಅದೇ ಮಾರ್ಗದಲ್ಲಿ ಸಲೀಸಾಗಿ ಪರಾರಿಯಾಗಿದ್ದರು. ಅಂತರಾಜ್ಯ ಹೆದ್ದಾರಿಯ ಅಂಚಿನಲ್ಲಿ, ಚೆಕ್ ಫೋಸ್ಟಿಗಿಂತ ಒಂದು ಕಿಮೀ ದೂರದಲ್ಲಿ ಕಳ್ಳತನ ನಡೆದರೂ ಪೊಲೀಸರಿಗೆ ಸ್ಥಳೀಯವಾಗಿ ಪ್ರಕರಣ ಭೇದಿಸಲು ಸರಿಯಾದ ಕುರುಹು ಸಿಕ್ಕಿರಲಿಲ್ಲ.

ಪೆರ್ಲದಲ್ಲಿ ಕೇರಳ ಸರಕಾರ ಅಳವಡಿಸಿದ ʼಹೈ ಡೆಫಿನೆಷನ್ʼ ಸಿಸಿಟಿವಿ ಕ್ಯಾಮಾರದಲ್ಲಿ ಬ್ರೀಝಾ ಕಾರಿನ ಫೋಟೊ ಕಂಡು ಬಂದಿದ್ದು ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು.ಏತನ್ಮಧ್ಯೆ ಆರೋಪಿಗಳ ಪೈಕಿ ಓರ್ವ ಕುಡಿದ ಮತ್ತಿನಲ್ಲಿ ಕಳ್ಳತನದ ಗುಟ್ಟು ಹೊರಗೆಡವಿದ್ದು, ಸ್ಥಳೀಯರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ ಕಾರಣ ಕಳ್ಳತನದ ಕೃತ್ಯ ಬಯಲಾಗಿತ್ತು.
