ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಿಂದ ದೋಚಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ಕೊನೆಗೂ ಸಿಕ್ತು..!

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಿಂದ ದೋಚಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ಕೊನೆಗೂ ಸಿಕ್ತು..!

ಕಾಸರಗೋಡು: ಕಾಸರಗೋಡಿನ ಪೈವಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಶೋಧ ನಡೆಸಿದ ಕರ್ನಾಟಕ ಪೊಲೀಸರಿಗೆ ಚಿನ್ನವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ.

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಿಂದ 4,20,70,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ದೋಚಿದ್ದು ಅದೇ ಚಿನ್ನ ಇಲ್ಲಿ ಹೂತಿಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ತಿಂಗಳು 7ರಂದು ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ವಿಶೇಷ ಪೊಲೀಸ್ ತಂಡವು ಕಾಸರಗೋಡಿನ ನಾಲ್ವರನ್ನು ಬಾಯಾರಿನ ಒಬ್ಬ ಸೇರಿದಂತೆ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತ್ತು. ಅವರಿಂದ ಬಂದ ಮಾಹಿತಿ ಮೇರೆಗೆ ಪೊಲೀಸರು ಸಜಿಂಕಿಲಾಗೆ ಆಗಮಿಸಿ ಚಿನ್ನವನ್ನು ಅಗೆದಿದ್ದಾರೆ.ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಕಾಸರಗೋಡು ಕಡೆಯ ಮೂವರು ಕಳ್ಳರ ಜತೆಗೆ ಬಾಯಾರು ಗ್ರಾಮದ ಪೈವಳಿಕೆ ಗಾಳಿಯಡ್ಕದ ವ್ಯಕ್ತಿಯೊಬ್ಬ ಭಾಗಿಯಾಗಿದ್ದ. ಬಾಯಾರು ನಿವಾಸಿ ಊರಿನಲ್ಲಿ ಭಾರೀ ಸಾಮಾಗ್ರಿ ಖರೀದಿಗೆ ತಯಾರಾಗಿದ್ದ.

ಈ ನಡುವೆ ಆತ ತನ್ನೂರಿನಿಂದ ಅಡ್ಯನಡ್ಕಕ್ಕೆ ಆಗಮಿಸಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಬ್ಯಾಂಕ್‌ಗೆ ನುಗ್ಗಿ ಹಣ ಕಳವು ಮಾಡಿರುವ ಬಗ್ಗೆ, ಯಾರು ಯಾರು ಏನು ಮಾಡಿದರು ಎಂಬ ಬಗ್ಗೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಈತ ಸಿಕ್ಕಿಬಿದಿದ್ದಾನೆ. ಕೆಲವು ವರ್ಷಗಳಿಂದ ವೆಲ್ಡರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲೂ ಬಹಿರಂಗಗೊಂಡಿತ್ತು. ಈ ತಂಡವೂ ಕಳ್ಳತನಗೈದ ನಗದು ಮತ್ತು ಚಿನ್ನಾಭರಣಗಳನ್ನು ಕೇರಳದ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಹೂತಿಟ್ಟಿದ್ದರೆನ್ನಲಾಗಿತ್ತು. ಇದೀಗ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕೇರಳಕ್ಕೆ ಆಗಮಿಸಿದ ಕರ್ನಾಟಕ ಪೊಲೀಸರು ಮೈದಾನದಲ್ಲಿ ಕಳೆದೆರಡು ದಿನದಿಂದ ಶೋಧ ಕಾರ್ಯ ನಡೆಸುತ್ತಿದ್ದು, ಕೊನೆಗೂ ಕಳ್ಳರು ಮೈದಾನದಲ್ಲಿ ಹೂತಿಟ್ಟ ಚಿನ್ನ ಪತ್ತೆಯಾಗಿದ್ದು ಈ ಸಂಬಂಧ ತನಿಖೆ ಮುಂದುವರೆದಿದೆ.

ರಾಜ್ಯ