
ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ 2023ರ ಡಿ.9ರಂದು ನಡೆದಿದ್ದ ದರೋಡೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ರಾಜ್ಯ ತಲಚೇರಿ ಮೂಲದ ಶಾಲಿನ್(30), ಟಿ.ಶ್ರೀಜಿತ್(38) ಮತ್ತು ಕೆ.ವೈಷ್ಣವ್(27) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.

ಈ ಹಿಂದೆ ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ 3 ಮಂದಿ ಆರೋಪಿಗಳನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದು, ಆ ಮೂಲಕ ಒಟ್ಟು 11 ಆರೋಪಿಗಳು ಸೆರೆ ಸಿಕ್ಕಿದಂತಾಗಿದೆ. ಈ ದರೋಡೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ఎల్లా ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ದರೋಡೆ ಕೃತ್ಯಕ್ಕೆ ಬಳಕೆ ಮಾಡಲಾದ 30 ಲಕ್ಷ ರೂ. ಮೌಲ್ಯದ ಒಟ್ಟು 5 ವಾಹನಗಳು ಹಾಗೂ 7ರಿಂದ 8 ಲಕ್ಷ ರೂ. ಹಣವನ್ನೂ ಜಪ್ತಿ ಮಾಡಲಾಗಿದೆ.
