
ಸುಳ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಸುಳ್ಯ ಪೊಲೀಸರ ದಾಳಿ ನಡೆಯುತ್ತಿದ್ದು ಮರಳು ದಂಧೆ ನಡೆಸುವವರಿಗೆ ಪೊಲೀಸರು ಸಿಂಹ ಸ್ವಪ್ನವಾಗಿದ್ದಾರೆ.

ಮಾ.2ರಂದು ಅರಂತೋಡು ಪಯಶ್ವಿನಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಟಿಪ್ಪರ್ ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಸುಳ್ಯಕ್ಕೆ ಪೊಲೀಸರು ತರುತ್ತಿದ್ದ ಸಂದರ್ಭ ಗಾಂಧಿನಗರ ಸಮೀಪಿಸುತ್ತಿದ್ದಂತೆ ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.
ಈ ಸಂದರ್ಭದಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಕ್ರಮ ಮರಳು ಗಣಿಗಾರಿಕೆಯನ್ನು ಸ್ಥಳೀಯ ನಿವಾಸಿ ತರುಣ್ ಎಂಬುವರು ಮಾಡುತ್ತಿದ್ದರು ಎನ್ನಲಾಗಿದ್ದು ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯ ನಂಬರ್ ಪ್ಲೇಟ್ ಅನ್ನು ಬಳಸದೆ ಈ ಕೃತ್ಯ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಟಿಪ್ಪರ್ ಚಾಲಕ, ಮಾಲಕ, ಮರಳು ಗಣಿಗಾರಿಕೆಗೆ ಸಹಕರಿಸಿದ ಸಂಬಂಧಪಟ್ಟ ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡು ಸುಳ್ಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

