
ಪುತ್ತೂರು: ಫೆ.24 ರ ತಡ ರಾತ್ರಿ ಪುತ್ತೂರಿನ ಹೊರ ವಲಯ ಬೆದ್ರಾಳದಲ್ಲಿ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯಲ್ಲಿ ಕೆಪಿಸಿಸಿ ಮುಖಂಡ ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತಿದ್ದ ಕಾರು ಹಾಗೂ ಇನ್ನೊಂದು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡು ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಕಾವು ಹೇಮಾನಾಥ ಶೆಟ್ಟಿ ಹಾಗೂ ತಂಡದವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಫೋರ್ಡ್ ಕಾರು ಮಧ್ಯೆ ಈ ಅಪಘಾತ ನಡೆದಿದೆ.

ಹೇಮಾನಾಥ ಶೆಟ್ಟಿಯವರು ಕಡಬ ತಾಲೂಕಿನ ಅಲಂಕಾರು ಸಮೀಪ ಮನವಳಿಕೆ ತರವಾಡು ಮನೆಯಲ್ಲಿ ನಡೆಯುತ್ತಿದ್ದ ನೇಮೋತ್ಸವದಲ್ಲಿ ಭಾಗವಹಿಸಿ ವಾಪಸ್ಸು ಆಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.ಹೇಮನಾಥ ಶೆಟ್ಟಿಯವರು ನೇಮೋತ್ಸವದ ಪಾಲ್ಗೊಂಡ ಬಳಿಕ ಕುದ್ಮಾರು ಮೂಲಕ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯಲ್ಲಿ ಪುತ್ತೂರಿನ ಕಡೆಗೆ ಬರುತ್ತಿದ್ದರು. ಅವರ ಕಾರು ಬೆದ್ರಾಳ ಬಳಿ ತಲುಪಿದ್ದಂತೆ ಎದುರಿನಿಂದ ಫೋರ್ಡ್ ಕಾರೊಂದು ಚಾಲಕನ ಹತೋಟಿ ಕಳಕೊಂಡು ಯದ್ವಾತದ್ವಾ ಬರುತಿತ್ತು. ಇದನ್ನು ಗಮನಿಸಿದ ಇನ್ನೋವಾ ಚಾಲಕ ಕಾರನ್ನು ರಸ್ತೆಯಿಂದ ಕೆಳಗಿಳಿಸಿದ್ದು ಈ ವೇಳೆ ಪಕ್ಕದಲ್ಲಿದ್ದ ಕಟ್ಟೆಗೆ ಕಾರು ಬಡಿದಿದೆ ಎಂದು ತಿಳಿದು ಬಂದಿದೆ.
ಈ ಬಳಿಕವು ಪೋರ್ಡ್ ಕಾರು ಇನ್ನೋವಾದ ಇನ್ನೊಂದು ಬದಿಗೆ ಢಿಕ್ಕಿ ಹೊಡೆದಿದ್ದು, ಇನ್ನೋವಾ ಕಾರು ಸಂಪೂರ್ಣ ಜಖಂ ಆಗಿದೆ. ಇನ್ನೋವಾ ಕಾರಿನಲ್ಲಿ ಕಾವು ಹೇಮಾನಾಥ ಶೆಟ್ಟಿ ರವರ ಜತೆಗೆ ಅವರ ಆಪ್ತ ಸಹಾಯಕ ರವಿ ಪ್ರಸಾದ್ ಶೆಟ್ಟಿ, ದೈವಗಳ ಮಧ್ಯಸ್ಥ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಹಾಗೂ ಚಾಲಕ ಇದ್ದರು . ಪೋರ್ಡ್ ಕಾರಿನಲ್ಲಿ ಚಾಲಕ ಮಾತ್ರ ಪ್ರಯಾಣಿಸುತ್ತಿದ್ದರು . ಆದರೇ ಎರಡು ಕಾರಿನಲ್ಲಿದ್ದವರು ಯಾವುದೇ ಆಪಾಯಗಳಿಲ್ಲದೇ ಪಾರಾಗಿದ್ದಾರೆ.